ಪ್ರತಿ ವರ್ಷ ಗಣೇಶ ಚತುರ್ಥಿ (Ganesh Chaturthi) ಹಬ್ಬ ಬಂತು ಎಂದರೆ ನಾನಾ ರೀತಿಯ ಗಣಪನ ಮೂರ್ತಿ ಅನಾವರಣಗೊಳ್ಳುತ್ತದೆ. ಗಣಪನ ಮೂರ್ತಿಗೂ ಚಿತ್ರರಂಗಕ್ಕೂ ಒಂದು ನಂಟು ಇದೆ.
ಕೆಲವರು ಗಣೇಶನಿಗೆ ಚಿತ್ರರಂಗದ ಟಚ್ ನೀಡುತ್ತಾರೆ. ಸಿನಿಮಾದ ಥೀಮ್ ಇಟ್ಟುಕೊಂಡು ಗಣೇಶನ ವಿಗ್ರಹ ರೆಡಿ ಆದ ಉದಾಹರಣೆ ಸಾಕಷ್ಟಿದೆ. ಈ ಬಾರಿ ಮತ್ತೆ ಗಣೇಶ ಚತುರ್ಥಿ ಬಂದಿದೆ.
ಆ ಪ್ರಯುಕ್ತ ಎಲ್ಲ ಕಡೆಗಳಲ್ಲಿ ವಿಘ್ನ ವಿನಾಶಕನ ಮೂರ್ತಿ ರೆಡಿ ಆಗುತ್ತಿದೆ. ಈ ಬಾರಿ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರನ್ನು ನೆನಪಿಸಿಕೊಳ್ಳುತ್ತಾ ಗಣಪತಿ ರೆಡಿ ಮಾಡಲಾಗುತ್ತಿದೆ.
ಪುನೀತ್ ರಾಜ್‍ಕುಮಾರ್ ಅವರು ನಿಧನ ಹೊಂದಿ 10 ತಿಂಗಳು ಕಳೆದಿದೆ. ಅವರಿಲ್ಲ ಎನ್ನುವ ನೋವು ಈಗಲೂ ಎಲ್ಲರನ್ನು ಕಾಡುತ್ತಿದೆ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಅದೇ ರೀತಿ ಕೆಲ ಕಲಾವಿದರು ಪುನೀತ್ ನೆನಪಲ್ಲಿ ಮಣ್ಣಿನಿಂದ ಗಣಪತಿ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ.
ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹೆಗಲ ಮೇಲೆ ಗಣೇಶ ಕೈಹಾಕಿ ನಿಂತಿರುವ ಗಣೇಶನ ಮೂರ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಮಾಡಲಾಗಿದ್ದು, ಇದಕ್ಕೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ತರೀಕೆರೆ ಪಟ್ಟಣದ ಕುಂಬಾರ ಬೀದಿಯಲ್ಲಿ ಹತ್ತಾರು ವರ್ಷಗಳಿಂದ ನಾನಾ ರೀತಿಯ ಗಣಪತಿ ಮೂರ್ತಿಯನ್ನ ಸಿದ್ಧಪಡಿಸುತ್ತಾ ಬರಲಾಗುತ್ತಿದೆ. ಈ ವರ್ಷ ಕಲಾವಿದರಾದ ಚಂದ್ರು ಹಾಗೂ ಪ್ರಸನ್ನ ಎಂಬುವವರು ಈ ಅದ್ಭುತ ಮೂರ್ತಿಯನ್ನು ಮಾಡಿದ್ದಾರೆ. ಇವರು ಕೂಡ ಪುನೀತ್ ರಾಜ್‍ಕುಮಾರ್ ಫ್ಯಾನ್ಸ್ ಅನ್ನೋದು ವಿಶೇಷ.