ಹುಬ್ಬಳ್ಳಿ: ‘ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪಿಲ್ಲ, ಅವರು ತಪ್ಪು ಮಾಡಿಲ್ಲ. ಅವರ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವ ಬಿಜೆಪಿ ಬಗ್ಗೆ ಅಸಹ್ಯವಾಗುತ್ತಿದೆ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದೆ ಎನ್ನುವುದು ಚರ್ಚೆ ವಿಷಯವೇ ಅಲ್ಲ. ನಮ್ಮಲ್ಲಿ ಮಾಂಸ ಸೇವಿಸುವ ಮತ್ತು ಸೇವನೆ ಮಾಡದಿರುವ ಭಕ್ತರು ಸಾಕಷ್ಟು ಇದ್ದಾರೆ’ ಎಂದರು.
ಮಾಂಸ ಸೇವಿಸಿ ದೇಗುಲಕ್ಕೆ ಹೋಗುವುದು ತಪ್ಪು ಎಂದು ನಾನು ಹೇಳಿಲ್ಲ. ದೇಗುಲಕ್ಕೆ ಹೇಗೆ ಹೋಗಬೇಕು ಎಂಬುದು ಭಾವನೆಗೆ ಸಂಬಂಧಪಟ್ಟಿದ್ದು. ಸಿದ್ದರಾಮಯ್ಯ ಅವರಿಗೆ ಯಾವ ಭಾವನೆ ಇದೆ ಗೊತ್ತಿಲ್ಲ.
– ಸುನೀಲ್ ಕುಮಾರ್, ಇಂಧನ ಸಚಿವ
ಹಿಂದೂ ಧರ್ಮದ ದೇಗುಲಗಳಿಗೆ ಹೋಗಬೇಕಾದರೆ ಸಂಪ್ರದಾಯ ಪಾಲಿಸಬೇಕು. ಅವರ ಸೋದರರು ಪಾಲಿಸುತ್ತಿದ್ದಾರೆ. ಸಿದ್ದರಾಮಯ್ಯ ಏನು ಮೇಲಿನಿಂದ ಇಳಿದುಬಂದಿದ್ದಾರೆಯೇ?
– ಎಸ್.ಮುನಿಸ್ವಾಮಿ, ಸಂಸದ