ಮಡಿಕೇರಿ: ಕಾರಿನ ಮೇಲೆ ಮೊಟ್ಟೆ ಎಸೆದು ಬಿಜೆಪಿ ಕಾರ್ಯಕರ್ತರ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮಗೂ ಮೊಟ್ಟೆ ಎಸೆಯಲು ಬರುತ್ತೆ. ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಡಲು ಆರಂಭಿಸಿದರೆ ಸಿಎಂ ಓಡಾದಲು ಆಗಲ್ಲ ಎಂದು ಎಚ್ಚರಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ಅರ್ಥವಿಲ್ಲ. ದುಡ್ಡುಕೊಟ್ಟು ಜನರನ್ನು ಕರೆತಂದು ಬಿಜೆಪಿ ಕಾರ್ಯಕರ್ತರು ಎಂದು ಪ್ರತಿಭಟನೆ ಮಾಡಿಸಿದ್ದಾರೆ. ಇದು ಹೇಡಿಗಳು ಮಾಡುವ ಕೆಲಸ ಎಂದು ಕಿಡಿಕಾರಿದರು.
ನನ್ನ ಕಾರಿನ ಮೇಲೆ ಮೊಟ್ಟೆ ಎಸೆಯಲು ಮುಂದಾಗಿದ್ದಾರೆ. ನಮಗೆ ಮೊಟ್ಟೆ ಎಸೆಯಲು ಬರಲ್ವಾ? ನಮಗೂ ಬರತ್ತೆ. ನಾವು ಹೋರಾಟ ಶುರು ಮಾಡಿದರೆ ಬಿಜೆಪಿ ನಾಯಕರು ಇದೇ ಕೊಡಗಿನಲ್ಲಿ ಓಡಾಡಲು ಆಗಲ್ಲ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಪ್ರಾರಂಭಿಸಿದರೆ ಸಿಎಂ ಬೊಮ್ಮಾಯಿ ಅವರು ಕೂಡ ಓಡಾಡಲು ಆಗಲ್ಲ ಎಂದು ಗುಡುಗಿದರು.