ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆ ಇನ್ನೂ ಜೀವಂತವಾಗಿದ್ದು, ಪಕ್ಷದ ತೀರ್ಮಾವನ್ನು ನೋಡಿಕೊಂಡು ಕೆಲವು ನಾಯಕರು ತಮ್ಮ ರಾಜಕೀಯ ಭವಿಷ್ಯದ ನಿರ್ಧರಿಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಮೈತ್ರಿ ಸರಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ್ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ನಡೆ ನಿಗೂಢವಾಗಿದ್ದು, ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಜಾರಕಿಹೊಳಿ ತಮ್ಮ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿರುವುದರಿಂದ ಮತ್ತೆ ಸಂಪುಟ ಸೇರಲು ಪ್ರಯತ್ನ ನಡೆ ಸುತ್ತಿದ್ದಾರೆ. ಸಂಪುಟ ವಿಸ್ತರಣೆ ವಿಷಯವನ್ನು ವರಿಷ್ಠರು ಜೀವಂತವಾಗಿಟ್ಟಿರುವುದರಿಂದ ಅದರ ಮೇಲೆ ಜಾರಕಿಹೊಳಿ ನಿರ್ಧಾರ ನಿಂತಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಕಡೆ ಒಲವು?
ಕಾಂಗ್ರೆಸ್ ನಾಯಕತ್ವ ವಿರುದ್ಧ ಬಂಡೆದ್ದು ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ಮತ್ತೆ ಆ ಪಕ್ಷಕ್ಕೆ ಹೋಗುವ ಆಸಕ್ತಿ ಹೊಂದಿಲ್ಲ, ಅವರು ಜೆಡಿಎಸ್ ಕಡೆಗೆ ಒಲವು ತೋರುತ್ತಿದ್ದಾರೆಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ. ಒಂದು ಮಾಹಿತಿ ಪ್ರಕಾರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಜತೆಗೆ ಮಾತುಕತೆ ನಡೆಸಿ ದ್ದಾರೆಂದೂ ಹೇಳಲಾಗು ತ್ತಿದೆ. ಆದರೆ, ತತ್‌ಕ್ಷಣಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ, ಚುನಾವಣೆ ವರೆಗೂ ಕಾದು ಬಿಜೆಪಿ ನಾಯಕರು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಮತ್ತಿಬ್ಬರು ಶಾಸಕರು?
ಒಂದು ವೇಳೆ ರಮೇಶ್ ಬಿಜೆಪಿ ತೊರೆಯಲು ನಿರ್ಧರಿಸಿದರೆ, ಅವರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿಯೇ ಇನ್ನಿಬ್ಬರು ಅವರ ಆಪ್ತ ಶಾಸಕರು ಅವರೊಂದಿಗೆ ತೆರಳುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಿಲ್ಲಾ ರಾಜಕೀಯ ಕಾರಣ
ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ರಾಜಕಾರಣವನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳಲು ಅಲ್ಲಿನ ಪ್ರಭಾವಿ ನಾಯಕರ ನಡುವೆ ನಿರಂತರ ಶೀತಲ ಸಮರ ನಡೆಯುತ್ತಲೇ ಇರುತ್ತದೆ. ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾದ ಬಳಿಕ ಬಿಜೆಪಿ ಹಾಗೂ ಜಿಲ್ಲಾ ರಾಜಕಾರಣವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರೆಲ್ಲರೂ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.
ಸಚಿವರಾದ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಹಿತ ಜಿಲ್ಲೆಯ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿಗೆ ಸಂಪುಟದಲ್ಲಿ ಸ್ಥಾನ ನೀಡದಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಕುಟುಂಬಕ್ಕಿಲ್ಲದ ಸಚಿವ ಸ್ಥಾನ
ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದ ಮೇಲೆ ಯಾವುದೇ ಪಕ್ಷದ ಸರಕಾರವಿದ್ದರೂ, ಅವರ ಕುಟುಂಬದ ಒಬ್ಬರು ಸಚಿವರಾಗಿರುತ್ತಾರೆಂಬ ಮಾತು ಕೇಳಿ ಬರುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ರಮೇಶ್ ವಿರುದ್ಧ ಆರೋಪ ಕೇಳಿ ಬಂದ ಬಳಿಕ ಅವರ ಸಹೋದರ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಅದು ಜಾರಕಿಹೊಳಿ ಸಹೋದರರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ರಮೇಶ್ ಪಕ್ಷಾಂತರ ಮಾಡಿದರೂ, ಬಾಲಚಂದ್ರ ಜಾರಕಿಹೊಳಿಬಿಜೆಪಿಯಲ್ಲಿಯೇ ಮುಂದುವರಿಯು ತ್ತಾರೆಂಬ ಮಾಹಿತಿ ಲಭ್ಯವಾಗಿದೆ.