ಮುಂಬೈ: 35 ವರ್ಷದ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿ, ರಸ್ತೆ ಬದಿಗೆ ಎಸೆದು ಹೋದ ಅಮಾನುಷ ಘಟನೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಂಡಾರ ಜಿಲ್ಲೆಯಲ್ಲಿ ನಡೆದಿದೆ.
ಜುಲೈ 30ರಂದು ಸಂತ್ರಸ್ತ ಮಹಿಳೆ ಕಮರ್‌ಗಾವ್ ಗ್ರಾಮಕ್ಕೆ ಸೋದರನ ಮನೆಗೆ ತೆರಳುತ್ತಿದ್ದರು.
ಈ ವೇಳೆ ಸ್ನೇಹಿತನ ಸೋಗಿನಲ್ಲಿ ಬಂದ ವ್ಯಕ್ತಿ ಅತ್ಯಾಚಾರ ಎಸಗಿದ್ದ. ಆ ನಂತರ ಆಗಸ್ಟ್ 1ರಂದು ಕನ್ಹಾಲ್‌ಮೊಹ್ ಪ್ರದೇಶದಲ್ಲಿ ಮತ್ತೊಮ್ಮೆ ಆಗಂತುಕರಿಬ್ಬರು ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ನಡುರಸ್ತೆಯಲ್ಲಿ ಎಸೆದು ಹೋಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಪ್ರಕರಣ ವರದಿಯಾಗುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧ ಆರಂಭವಾಗಿದೆ. ಪ್ರಕರಣವನ್ನು ಖಂಡಿಸಿ, ವಿರೋಧ ಪಕ್ಷಗಳ ಮಹಾ ಅಘಾಡಿ ಮೈತ್ರಿಕೂಟವು ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ‘ಸಂಪುಟ ವಿಸ್ತರಿಸದೆ ತಡ ಮಾಡುತ್ತಿರುವ ಕಾರಣ ಸರ್ಕಾರ ದಿನದಿಂದ ದಿನಕ್ಕೆ ಆಡಳಿತದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ವಾಗ್ದಾಳಿ ನಡೆಸಿದ್ದಾರೆ.
ಈ ನಡುವೆ ಶಿಂದೆ ಅವರು ಪ್ರಕರಣದ ವಿಚಾರಣೆಯನ್ನು ಐಪಿಎಸ್ ಅಧಿಕಾರಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ವಹಿಸಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಇಬ್ಬರನ್ನು ವಿಚಾರಣೆ ನಡೆಸಲಾಗಿದೆ.
Laxmi News 24×7