ಜುಲೈ, 28 : ಚಿಕ್ಕಮಗಳೂರಿನಲ್ಲಿ ಇಂದು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಅಲ್ಲದೆ ಮಿಲನ್ ಥಿಯೇಟರ್‌ನಲ್ಲಿ ಲಾಂಗ್-ಮಚ್ಚುಗಳು ಜಳಪಿಸಿದ್ದು, ಭರತ್ ಎಂಬಾತನಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ.
ಇಂದು ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿದ್ದು, ಕೆಲವರು ಚಿಕ್ಕಮಗಳೂರು ನಗರದ ಮಿಲನ್ ಥಿಯೇಟರ್‌ನಲ್ಲಿ ಗೂಂಡಾಗಳಂತೆ ವರ್ತನೆಯನ್ನು ಮೆರೆದಿದ್ದಾರೆ. ಥಿಯೇಟರ್‌ನಲ್ಲಿ ಮ್ಯಾಟ್ನಿ ಶೋ ಆರಂಭವಾಗುತ್ತಿದ್ದಂತೆ ಬಾಗಿಲ ಪಕ್ಕದ ಸೀಟ್‍ನಲ್ಲಿ ಕೂತಿದ್ದ ಒಂದು ಯುವಕರ ಗುಂಪು ಮೇಲಿಂದ ಮೇಲೆ ಸುಮ್ಮನೆ ಅಡ್ಡದಿಡ್ಡಿಯಾಗಿ ಹೊರಗಡೆ ಹೋಗೂದು, ಒಳಗಡೆ ಬರೋದು ಮಾಡಿದ್ದಾರೆ.
ಈ ವೇಳೆ ಮತ್ತೊಂದು ಗುಂಪಿನ ಯುವಕರು ಎಷ್ಟು ಸಲ ಹೊರಗೆ ಹೋಗಿ ಬರುತ್ತಿರೋ ಎಂದು ಕೇಳಿದ್ದಾರೆ. ಆಗ ಈ ಎರಡು ಯುವಕರ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದ್ದು, ಲಾಂಗ್-ಮಚ್ಚುಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ.
ಥಿಯೇಟರ್ ಒಳಗೆ ಆರಂಭವಾದ ಜಗಳ ಟಾಕೀಸ್‍ನ ಹೊರಾಂಗಣದಲ್ಲೂ ಮುಂದುವರೆದು ಹಿಗ್ಗಾಮುಗ್ಗಾ ಥಳಿಸಿಕೊಂಡಿದ್ದಾರೆ. ಕೆಲವರು ಘರ್ಷಣೆಯಲ್ಲಿ ಕೆಳಗಡೆ ಬಿದ್ದರೂ ಕೂಡ ಲಾಂಗ್ ಬೀಸಿ ಹಲ್ಲೆ ಮಾಡಿದ ಕಾರಣ ಭರತ್ ಎಂಬ ಯುವಕನಿಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ನಂತರ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಿದ್ದಾರೆ. ಇನ್ನು ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭರತ್ ಹೇಳಿಕೆ ನೀಡಿದ್ದು, ಗಣೇಶ್, ಪ್ರೀತಂ, ಈಶ್ವರ್, ಜೀವನ್, ಪ್ರಜ್ವಲ್, ಪನ್ನು, ಸಚಿನ್ ಸೇರಿದಂತೆ ಇನ್ನು ನಾಲ್ಕು ಜನ ನನ್ನ ಮೇಲೆ ಹಲ್ಲೆ ಮಾಡಿದ್ದರೆ ಎಂದಿದ್ದಾನೆ.
ಸ್ಥಳದಲ್ಲಿ ಚಾಕು ಇರಿತವೂ ನಡೆದಿದ್ದು, ರಂಪಾಟವನ್ನೇ ಮಾಡಿದ್ದರು. ನಾಲ್ಕು ಜನರ ಗುಂಪೊಂದು ಭರತ್‌ನನ್ನು ಚಾಕುವಿನಿಂದ ಚುಚ್ಚಿ ಹೊಡೆದಿದ್ದು, ಆತನ ತಲೆ ಫುಲ್ ಓಪನ್ ಆಗಿದೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಭರತ್ ಕಡೆಯವರ ಹುಡುಗರು ಕೂಡ ಆಸ್ಪತ್ರೆ ಮುಂಭಾಗ ಸೇರಿ ಆಕ್ರೋಶ ಹೊರಹಾಕಿದ್ದಾರೆ.