ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಹೂಲಿಕಟ್ಟಿ ಗ್ರಾಮದಲ್ಲಿ ನೆಲದ ಮೇಲೆ ಚಿರತೆ ಹೆಜ್ಜೆ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸವದತ್ತಿ ವಲಯ ಅರಣ್ಯ ಅಧಿಕಾರಿಗಳು ಚಿರತೆಯ ಹೆಜ್ಜೆಯನ್ನು ಗುರುತು ಮಾಡಿದ್ದಾರೆ. ವಿಶೇಷ ತಂಡ ರಚಿಸಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸುತ್ತಮುತ್ತ ಚಿರತೆಗೆ ಶೋಧ ಕಾರ್ಯ ಮುಂದುವರಿದಿದೆ.ಡಂಗೂರ ಹಾಗೂ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದ್ದು, ಹೂಲಿಕಟ್ಟಿ, ಶಿಂದೋಗಿ, ಯಕ್ಕೇರಿ ಸರಹದ್ದಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.