ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡುವ ಮುನ್ನ ಬಿಜೆಪಿ ಶಾಸಕ ರಾಜುಗೌಡ, ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಔಪಚಾರಿಕವಾಗಿ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮದವರ ಕಣ್ಣು ಮತ್ತು ಕ್ಯಾಮರಾ ಅವರತ್ತ ಹೊರಳಿದವು.
ಇಷ್ಟಾಗಿದ್ದೇ ತಡ ರಾಜುಗೌಡ ಅವರು ಬೈರತಿ ಹೆಗಲ ಮೇಲೆ ಕೈಹಾಕಿ ಗಟ್ಟಿಯಾಗಿ ಹಿಡಿದು ಫೋಟೋಗೆ ಪೋಸ್ ಕೊಟ್ಟರು.
ರಾಜುಗೌಡರು ಇಷ್ಟಕ್ಕೆ ಸುಮ್ಮನಾಗದೆ ತನ್ನ ಹೆಗಲ ಮೇಲಿನ ಕೇಸರಿ ಶಾಲನ್ನು ಬೈರತಿ ಹೆಗಲಿಗೆ ಹಾಕುತ್ತಿದ್ದಂತೆ ಮಾಧ್ಯಮದವರು ಮುಗಿಬಿದ್ದು ಚಿತ್ರೀಕರಿಸಿದರು. ಕೇಸರಿ ಶಾಲನ್ನು ಹೊರ ತೆಗೆಯಲು ಬೈರತಿ ಒದ್ದಾಡುತ್ತಿದ್ದಾಗ ಗೂಳಿಗಟ್ಟಿ ಶೇಖರ್ ಕೂಡ ತನ್ನ ಕೇಸರಿ ಶಾಲನ್ನ ಬೈರತಿಗೆ ಹಾಕಿದರು. ಇದಕ್ಕೆ ರೇಣುಕಾಚಾರ್ಯ ಕೂಡ ಸಾಥ್ ನೀಡಿದರು.
ಮೂವರ ಮಧ್ಯೆ ಸಿಕ್ಕು ಒದ್ದಾಡುತ್ತಿದ್ದ ಬೈರತಿ, ದೂರದಲ್ಲಿ ನಿಂತಿದ್ದ ಸಚಿವ ಅಶೋಕ್ ಅವರತ್ತ ನೋಡಿ ನೀನಾದರೂ ಹೇಳಣ್ಣ ಎಂದು ಅಲವತ್ತುಕೊಂಡರು. ಮೊಗಸಾಲೆಯಲ್ಗಿ ನಗೆಯ ಅಲೆ ಎದ್ದರೆ, ಬೈರತಿ ಕೊಸರಾಡುತ್ತಿದ್ದರು. ಮೂವರು ಶಾಸಕರು ಸೇರಿ ಬೈರತಿಗೆ ಸಮಾಧಾನ ಮಾಡುತ್ತಾ ಮತದಾನದ ಕೊಠಡಿಯತ್ತ ಹೆಜ್ಜೆ ಹಾಕಿದರು