ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಪೋಟೋ, ವೀಡಿಯೋ ಚಿತ್ರೀಕರಣ ನಿಷೇಧ, ಆ ಬಳಿಕ ವಾಪಾಸ್ ನಂತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ C.S. ಷಡಾಕ್ಷರಿ ವಿರುದ್ಧ ಸಿಡಿದೆದ್ದಿದೆ.
ಇದೀಗ ಮುಂದುವರೆದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿಯವರು ಸಿಎಸ್ ಷಡಾಕ್ಷರಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ಎನ್ನುವ ಬಗ್ಗೆ ಮುಂದೆ ಓದಿ..
ಹೀಗಿದೆ.. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿಗೆ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಬರೆದಿರುವಂತ ಪತ್ರದ ಸಾರಾಂಶ
ನನ್ನ ತಂದೆ ಕೃಷ್ಣಾರೆಡ್ಡಿ ವಿ.ಯವರೂ 1970-80ರ ದಶಕದಲ್ಲಿ ಸರ್ಕಾರಿ ನೌಕರರಾಗಿದ್ದವರು. ಹಾಗಾಗಿ ಸರ್ಕಾರದ ಹಾಗೂ ಜನರ ತೆರಿಗೆಯ ಹಣದ ಋಣ ನನ್ನ ಮತ್ತು ನನ್ನ ಕುಟುಂಬದ ಮೇಲಿದೆ. ಆ ಹಿನ್ನೆಲೆಯಲ್ಲಿ ನಾನು ಅತ್ಯಂತ ಪ್ರೀತಿ, ನೋವು, ಬೇಸರ, ದುಃಖ, ಕಾಳಜಿ, ಅಸಹನೆ ಮುಂತಾದುವುಗಳಿಂದ ಕೂಡಿದ ಮಿಶ್ರಭಾವದಿಂದ ನಿಮಗೆ ಮತ್ತು ನಿಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ.
ನಿಮ್ಮ ದುರಾಲೋಚನೆ, ವ್ಯಾಪ್ತಿಮೀರಿದ ನಡವಳಿಕೆ ಮತ್ತು ದುಷ್ಕೃತ್ಯದಿಂದಾಗಿ ನೀವು ರಾಜ್ಯದ ಲಕ್ಷಾಂತರ #ಪ್ರಾಮಾಣಿಕಸರ್ಕಾರಿನೌಕರ’ರ ಘನತೆ ಮತ್ತು ಗೌರವಕ್ಕೆ ಚ್ಯುತಿ ತಂದಿದ್ದೀರಿ. ರಾಜ್ಯದ ಮುಖ್ಯಮಂತ್ರಿಯನ್ನು ಮತ್ತು DPAR ಇಲಾಖೆಯ ಅಯೋಗ್ಯ ಅಧಿಕಾರಿಗಳನ್ನು ದಾರಿ ತಪ್ಪಿಸಿ, ಅವರಿಂದ ಕಾನೂನುಬಾಹಿರ ಮತ್ತು ಜನವಿರೋಧಿ ಆದೇಶವನ್ನು ಹೊರಡಿಸಿ, ತದನಂತರ ಕೇವಲ ಒಂದೇ ದಿನದಲ್ಲಿ ಜನಾಕ್ರೋಶಕೆ ಮಣಿದು ಸರ್ಕಾರ ಆ Draconian ಆದೇಶವನ್ನು ಹಿಂಪಡೆಯುವಂತೆ ಆಗಿ, ರಾಜ್ಯ ಸರ್ಕಾರಕ್ಕೆ ಹಾಗೂ ಅದರ ನೌಕರರಿಗೆ ಮುಜುಗರ ಮತ್ತು ಅವಮಾನ ಆಗುವಂತಾಗಲು ನೇರ ಕಾರಣ ಆಗಿದ್ದೀರಿ. ಮತ್ತು ಆ ದುರುದ್ದೇಶಪೂರಿತ ಆದೇಶಕ್ಕೆ ನಾನೇ ಕಾರಣ ಎಂದು ಆಲಮಟ್ಟಿಯಲ್ಲಿ ನಡೆದ ಸಭೆಯಲ್ಲಿ ಕೊಚ್ಚಿಕೊಳ್ಳುವ ಮೂಲಕ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದೀರಿ.
ಆ ಮೂಲಕ, ಇದರಲ್ಲಿ ಯಾವ ಪಾತ್ರವೂ ಇಲ್ಲದ ಮತ್ತು ಈ ಘಟನೆಯ ಕಾರಣಕ್ಕಾಗಿ ತೀವ್ರವಾಗಿ ನೊಂದಿರುವ ರಾಜ್ಯದ ಲಕ್ಷಾಂತರ #ಪ್ರಾಮಾಣಿಕಸರ್ಕಾರಿನೌಕರ’ರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ.
ಹಾಗಾಗಿ, ಈ ಕೂಡಲೇ ನೀವು ರಾಜ್ಯದ ಎಲ್ಲಾ ಸರ್ಕಾರಿ ನೌಕರರಲ್ಲಿ Unconditional ಕ್ಷಮೆ ಯಾಚಿಸಬೇಕು ಎಂದು ನಾನು ಮೊದಲಿಗೆ ಆಗ್ರಹಿಸುತ್ತೇನೆ.
ಅಂದಹಾಗೆ, ನೀವು ಸರ್ಕಾರಿ ನೌಕರರ ಸ್ವಾಭಿಮಾನದ ಬಗ್ಗೆ ಮಾತನಾಡಿದ್ದೀರಿ. ರಾಜ್ಯದ 6 ಲಕ್ಷ ಸರ್ಕಾರಿ ನೌಕರರಲ್ಲಿ ಕನಿಷ್ಠ ನಾಲ್ಕೈದು ಲಕ್ಷ ಸರ್ಕಾರಿ ನೌಕರರು ಈಗಲೂ ಸ್ವಾಭಿಮಾನ ಮತ್ತು ಘನತೆಯಿಂದ ಬದುಕುತ್ತಿದ್ದಾರೆ. ಯಾಕೆಂದರೆ ಅವರ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಲಂಚಕ್ಕೆ ಅವಕಾಶ ಬಹಳ ಕಡಿಮೆ ಇರುತ್ತದೆ. ಲಂಚಗುಳಿತನ ಮತ್ತು ಅಕ್ರಮಗಳಿಗೆ ಅಪಾರ ಅವಕಾಶ ಇರುವ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, RDPR ಇಲಾಖೆ, ಅಬಕಾರಿ ಇಲಾಖೆ, ಕೃಷಿ ಇಲಾಖೆಯಂತಹ ಕೆಲವೇ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿಯೂ ಎಲ್ಲರೂ ಭ್ರಷ್ಟರಲ್ಲ. ಆದರೆ ಭ್ರಷ್ಟರ ಅಟ್ಟಹಾಸ ಮಾತ್ರ ಮಿತಿಮೀರಿದೆ. ತಮ್ಮ ಹಾಗೆ ಎಲ್ಲರೂ ಪರಮಭ್ರಷ್ಟರೇ ಎನ್ನುವ ಸಾರ್ವತ್ರಿಕ ಭಾವನೆಯನ್ನು ಸೃಷ್ಟಿಸಿರುವುದು ಆ ಅಲ್ಪಸಂಖ್ಯಾತ ಭ್ರಷ್ಟರೇ. ಬಹುಸಂಖ್ಯಾತ ಪ್ರಾಮಾಣಿಕ ನೌಕರರು ಹೆದರುಪುಕ್ಕಲರಾಗಿ ಭ್ರಷ್ಟಾಚಾರ ಬೆಳೆಯಲು ಪರೋಕ್ಷವಾಗಿ ಕಾರಣರಾಗಿದ್ದಾರೆ ಮತ್ತು ಆ ಕಾರಣದಿಂದಾಗಿಯೇ ಅವರೂ ಆರೋಪಗಳಿಗೆ ಗುರಿಯಾಗುತ್ತಿದ್ದಾರೆ.
ಅಂದ ಹಾಗೆ, #ಸ್ವಾಭಿಮಾನ ಇರುವ ಯಾವುದೇ ನೌಕರ ಭ್ರಷ್ಟ ಅಥವ ಲಂಚಕೋರ ಆಗಲು ಸಾಧ್ಯವಿಲ್ಲ. ಹಾಗಾಗಿ ಭ್ರಷ್ಟರನ್ನು ಮತ್ತು ಲಂಚಕೋರರನ್ನು ಪ್ರಶ್ನಿಸಿದಾಗ ಮಾನಧನರೇ ಅಲ್ಲದ ಅವರ ಯಾವ ರೀತಿಯ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತದೆ?
ನೀವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ. ಇಂದು ಸರ್ಕಾರಿ ನೌಕರರ ಘನತೆಗೆ ಹೆಚ್ಚು ಚ್ಯುತಿ ಬಂದಿರುವುದು ಈಗಾಗಲೇ ಹೇಳಿದಂತೆ ನಿಮ್ಮಲ್ಲಿಯ ಕೆಲವರು ಮಾಡುವ ಭ್ರಷ್ಟಾಚಾರ, ಲಂಚಕೋರತನ, ಕರ್ತವ್ಯಲೋಪ, ಸಾರ್ವಜನಿಕರೊಂದಿಗಿನ ದುರ್ನಡತೆ ಮುಂತಾದ ಅವಗುಣಗಳ ಕಾರಣಕ್ಕೆ; ಸರ್ಕಾರಿ ನೌಕರ/ನೌಕರಳಿಗೆ ತಕ್ಕುದಲ್ಲದ ನಡವಳಿಕೆಯ ಕಾರಣಕ್ಕೆ. ಸಮಾಜದಲ್ಲಿ ಸರ್ಕಾರಿ ನೌಕರರ ಘನತೆ ಮತ್ತು ಗೌರವ ಹೆಚ್ಚಾಗಬೇಕು ಎಂದರೆ ಅವರು ತಮ್ಮ ದುರ್ನಡತೆ, ದುಷ್ಕೃತ್ಯ, ಅಕ್ರಮ ಮತ್ತು ಕಾನೂನುಬಾಹಿರ ಕೆಲಸಗಳನ್ನು ನಿಲ್ಲಿಸಬೇಕು. ಜನರ ವಿಶ್ವಾಸ ಪಡೆಯಬೇಕು.
ಅದರ ಜೊತೆಗೆ, ನೀವು ಯಾವ ಹುದ್ದೆಯಲ್ಲಿ ಮತ್ತು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೀರೋ ಅದೇ ಸ್ಥಳಕ್ಕೆ ಇಷ್ಟರಲ್ಲಿಯೇ KRS ಪಕ್ಷದ ನಿಯೋಗ ಭೇಟಿ ನೀಡಿ, ನಿಮ್ಮ ಅನುಚಿತ ವರ್ತನೆ, ಕೆಲಸದ ಸ್ಥಳದಲ್ಲಿ ಗೈರು ಹಾಜರಿ, ಕರ್ತವ್ಯಲೋಪ ಮುಂತಾದ ವಿಚಾರಗಳ ಕುರಿತು ನಿಮ್ಮ ಮೇಲಧಿಕಾರಿಗೆ ದೂರು ನೀಡಲಿದೆ. ಲೋಕಾಯುಕ್ತದ ಗಮನಕ್ಕೂ ತರಲಿದೆ.
#ಸಂಬಳನನ್ನಹಕ್ಕು, #ಗಿಂಬಳನನ್ನತಾಕತ್ತು, #ಕೆಲಸನನ್ನಮರ್ಜಿ ಎನ್ನುವ ಮನಸ್ಥಿತಿಯ ಕೆಲವು ಭ್ರಷ್ಟ ಸರ್ಕಾರಿ ನೌಕರರಿಗೆ ಅವರ ನೈಜಕರ್ತವ್ಯವನ್ನು ನೆನಪಿಸುವ ಕೆಲಸವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಮಾಡುತ್ತಾ ಬಂದಿದೆ. ಆ ಮೂಲಕ #ಲಂಚಮುಕ್ತಕರ್ನಾಟಕ, ಬಸವಣ್ಣನ #ಕಲ್ಯಾಣಕರ್ನಾಟಕ, ಕುವೆಂಪುರ #ಸರ್ವೋದಯಕರ್ನಾಟಕ’ವನ್ನು ಕಟ್ಟಲು ಕಟಿಬದ್ಧವಾಗಿದೆ. ಆ ಹಾದಿಯಲ್ಲಿ ಎದುರಾಗುವ ಎಂತಹ ದುಷ್ಟಶಕ್ತಿಗಳನ್ನೂ #ಜನಬಲ ಮತ್ತು #ಸಂಘಬಲ’ದಿಂದ KRS ಪಕ್ಷ ಮೆಟ್ಟಿ ನಿಲ್ಲುತ್ತದೆ. ಇದು ಸತ್ಯ ಮತ್ತು ವಾಸ್ತವ.
ಇದನ್ನು ನೀವೂ ಸೇರಿದಂತೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ನೆನಪಿಡಬೇಕು. ಮತ್ತು ನಾಡು ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕ ನೌಕರರು ನಮ್ಮೊಡನೆ ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇವೆ.
ಇದೆಲ್ಲವನ್ನೂ ನಾನು ಕರುನಾಡಿನ ಹಿತದೃಷ್ಟಿಯಿಂದ ಹೇಳಿದ್ದೇನೆ. ನೀವೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
ಶುಭವಾಗಲಿ.
ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.