ಚಿಕ್ಕೋಡಿ: ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳಿಗೆ ಉಂಟಾದ ಭೀಕರ ಪ್ರವಾಹದ ಸಂತ್ರಸ್ತರ ಕಣ್ಣಿರೂ ಮಾತ್ರ ಇನ್ನೂ ನಿಂತಿಲ್ಲ. ಪ್ರವಾಹದಲ್ಲಿ ಕೊಚ್ಚಿ ಹೋದ ರಸ್ತೆ, ಬ್ರಿಡ್ಜ್ಗಳ ಕಾಮಗಾರಿ ಮುಕ್ತಾಯಗೊಂಡಿವೆ. ಆದರೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ.
ಇದರಿಂದ ನದಿ ತೀರದ ಜನ ಸಂಕಷ್ಟ ಪಡುವಂತಾಗಿದೆ.
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಪ್ರವಾಹ ಎದುರಾಗಿತ್ತು. ಇದರಿಂದ ಚಿಕ್ಕೋಡಿ ತಾಲೂಕಿನ 11 ಗ್ರಾಮಗಳು ನಡುಗಡ್ಡೆಯಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಕಳೆದ ವರ್ಷ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಆದರೆ ಈಗ ಮತ್ತೆ ಮಳೆಗಾಲ ಆರಂಭವಾಗಿದೆ. ಪ್ರವಾಹ ಉಂಟಾಗುವ ಸಂಭವ ಇದ್ದರೂ ಸಹ ಕಳೆದ ವರ್ಷದ ಪರಿಹಾರ ಸಿಗದೇ ಇರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
2019ರ ದೊಡ್ಡ ಪ್ರಮಾಣದ ಪ್ರವಾಹದಿಂದ ಚೇತರಿಸಿಕೊಳ್ಳುವ ಮುನ್ನವೇ 2020ರಲ್ಲಿ ಮಹಾಪೂರ ನದಿ ತೀರದ ಜನರನ್ನು ಮತ್ತೂಮ್ಮೆ ಸಂಕಷ್ಟಕ್ಕೆ ಈಡು ಮಾಡಿತ್ತು. ಸರ್ಕಾರ ಸಮರ್ಪಕ ಸರ್ವೇ ನಡೆದಿದೆ ಎಂದು ಹೇಳುತ್ತಿದ್ದರೂ ಕೂಡಾ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಸಿಗದೇ ಇರುವುದು ದುರದೃಷ್ಟಕರವಾಗಿದೆ. ಮನೆಗಳಿಗೆ ಹಾನಿಯಾದ ಸಂತ್ರಸ್ತರಿಗೆ ಮೊದಲ ಕಂತಾಗಿ 95 ಸಾವಿರ ರೂ. ಹೊರತು ಪಡಿಸಿ ಬಹುತೇಕ ಜನರಿಗೆ ಉಳಿದ ಪರಿಹಾರ ಮರೀಚಿಕೆಯಾಗಿದೆ.
ಚಿಕ್ಕೋಡಿ ತಾಲೂಕಿನ ಜನವಾಡ, ಶಮನೇವಾಡಿ, ಸದಲಗಾ, ಯಕ್ಸಂಬಾ, ಮಲಿಕವಾಡ, ಕಲ್ಲೋಳ, ಯಡೂರ, ಚೆಂದೂರ, ಮಾಂಜರಿ, ಇಂಗಳಿ ಮತ್ತು ಅಂಕಲಿ ಗ್ರಾಮಗಳು ಕೃಷ್ಣಾ ಮತ್ತು ದೂಧಗಂಗಾ ನದಿ ಪ್ರವಾಹಕ್ಕೆ ತುತ್ತಾಗುತ್ತವೆ. ತಾಲೂಕು ಆಡಳಿತದ ಮಾಹಿತಿ ಪ್ರಕಾರ ಚಿಕ್ಕೋಡಿ ತಾಲೂಕಿನ 11 ಗ್ರಾಮಗಳಲ್ಲಿ 4319 ಮನೆಗಳಿಗೆ ಹಾನಿ ಸಂಭವಿಸಿತ್ತು.
ಅದರಲ್ಲಿ ಈಗಾಗಲೇ 3800 ಸಂತ್ರಸ್ತರ ಮನೆಗಳಿಗೆ 95 ಸಾವಿರ ರೂ. ದಂತೆ ಮೊದಲ ಕಂತು ಪರಿಹಾರ ಹಸ್ತಾಂತರಿಸಲಾಗಿದೆ. ತಾಂತ್ರಿಕ ತೊಂದರೆಯಿಂದ ಜಿಲ್ಲಾ ನೋಡಲ್ ಅಧಿಕಾರಿಗಳು ಉಳಿದ 519 ಮನೆಗಳಿಗೆ ಪರಿಹಾರ ತಡೆಹಿಡಿದಿದ್ದಾರೆ. ಸಮಸ್ಯೆ ಪರಿಹಾರದ ನಂತರ ಅವರಿಗೆ ಪರಿಹಾರ ದೊರಕಲಿದೆ.