ಬೆಳಗಾವಿ: ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯಕ್ಕೆ ಒಳಹರಿವು ಪ್ರಮಾಣ ತುಂಬಾ ಕಡಿಮೆ ಇದೆ.
ಎರಡು ದಿನಗಳ ಹಿಂದೆ 30 ಟಿಎಂಸಿ ಅಡಿಯಷ್ಟು ನೀರು ಅಲ್ಲಿ ಸಂಗ್ರಹವಾಗಿದೆ. ಅದರ ಸಂಗ್ರಹಣಾ ಸಾಮರ್ಥ್ಯ ಒಟ್ಟು 105 ಟಿಎಂಸಿ ಅಡಿ. ಅದು ಸಂಪೂರ್ಣ ತುಂಬುವವರೆಗೆ ನೀರನ್ನು ಹೊರ ಬಿಡುವುದಿಲ್ಲ. ವಾರಣಾದಲ್ಲಿ 34 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಇನ್ನೊಂದು ಜಲಾಶಯವಿದೆ. ಅಲ್ಲಿಯೂ 25 ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿಲ್ಲ. ಹಾಗಾಗಿ ಎರಡೂ ಜಲಾಶಯಗಳಿಂದ ಸದ್ಯಕ್ಕೆ ನೀರು ಬಿಡುವುದಿಲ್ಲ ಎಂದು ಅವರು ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ದೂಧಗಂಗಾದಲ್ಲಿ 25 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಈವರೆಗೆ 11 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಇದೂ ಕೂಡ ಅಪಾಯದ ಮಟ್ಟ ತಲುಪಿಲ್ಲ.
ನೀರು ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ದಾಟಿದ ಬಳಿಕ ಬ್ಯಾರೇಜ್ ಹಾಗೂ ಜಲಾಶಯಗಳು ಸೇರಿ ಏಳು ಜಲಸಂಗ್ರಹಗಳಿವೆ ನಮ್ಮಲ್ಲಿವೆ. ಎಲ್ಲ ಸೇರಿ 59 ಟಿಯಂಸಿ ಅಡಿಯಷ್ಟು ಮಾತ್ರ ನೀರಿದೆ ಎಂದು ಸಚಿವ ಮಾಹಿತಿ ನೀಡಿದರು.