Breaking News

ಪಿಎಸ್‌ಐ ನೇಮಕಾತಿ ಅಕ್ರಮ: ಹೆದರಿಸಿ ₹10 ಲಕ್ಷ ವಸೂಲಿ ಮಾಡಿದ್ದ ಡಿವೈಎಸ್ಪಿ!

Spread the love

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದವರ ಮಾಹಿತಿ ಇದ್ದರೂ ಬಂಧಿಸುವುದನ್ನು ಬಿಟ್ಟು ₹80 ಲಕ್ಷಕ್ಕೆ ಬೇಡಿಕೆ ಇಟ್ಟು ಸಂಧಾನದ ಬಳಿಕ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ₹10 ಲಕ್ಷ ಪಡೆದಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ.

 

‘ಅಕ್ರಮದ ಕಿಂಗ್‌ಪಿನ್ ಅಫಜಲ ಪುರದ ಆರ್.ಡಿ.ಪಾಟೀಲ ಸೂಚನೆ ಆಧರಿಸಿ ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಮಂಜುನಾಥ ಮೇಳಕುಂದಿ ಹಾಗೂ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಚಿಳ್ಳ ಅವರಿಗೆ ಕರೆ ಮಾಡಿ ಸಾಲಿ ಬೆದರಿಕೆ ಹಾಕಿದ್ದಾರೆ. ಅಕ್ರಮವನ್ನು ಬಹಿರಂಗಪಡಿಸಬಾರದು ಎಂದಿದ್ದರೆ ಹಣ ನೀಡಬೇಕು. ಅಲ್ಲದೇ, ಆರ್.ಡಿ.ಪಾಟೀಲ ಹೇಳಿದಂತೆ ಕೇಳಬೇಕು’ ಎಂದೂ ತಾಕೀತು ಮಾಡಿದ್ದ ಬಗ್ಗೆ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಕರೆ ಮಾಡಿ ಬೆದರಿಕೆ ಹಾಕುವುದಕ್ಕೂ ಮುನ್ನ ಆರ್‌.ಡಿ.ಪಾಟೀಲ ಭೇಟಿ ಮಾಡಿದ್ದ ಸಾಲಿ ತಮಗೆ ₹10 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನಾನು ಮನೆ ಕಟ್ಟಿಸುತ್ತಿದ್ದು, ಅಷ್ಟು ಹಣ ಕೊಡಲಾಗದು. ಮೇಳಕುಂದಿ, ಕಾಶಿನಾಥರನ್ನು ಹೆದರಿಸಿದರೆ ಹಣ ಸಿಗಬಹುದು ಎಂದು ಪಾಟೀಲ ಸಲಹೆ ಕೊಟ್ಟಿದ್ದರು.

ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಗಿದ ಒಂದು ವಾರದ ಬಳಿಕ ಇಬ್ಬರಿಗೂ ಕರೆ ಮಾಡಿದ್ದ ಸಾಲಿ, ‌’ನೀವು ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಬಗ್ಗೆ ದೂರು ಬಂದಿದೆ. ಇಬ್ಬರೂ ನನ್ನನ್ನು ಭೇಟಿ ಮಾಡಬೇಕು ಎಂದು ತಾಕೀತು ಮಾಡಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕಂಗಾಲಾದ ಮೇಳಕುಂದಿ, ಕಾಶಿನಾಥ ಇಬ್ಬರೂ ಆರ್‌.ಡಿ.ಪಾಟೀಲ ಮನೆಗೆ ಸಂಧಾನಕ್ಕೆ ತೆರಳುತ್ತಾರೆ. ಅಲ್ಲಿಂದಲೇ ಸಾಲಿ ಅವರಿಗೆ ವಾಟ್ಸ್‌ಆಯಪ್ ಕರೆ ಮಾಡಿದ ಪಾಟೀಲ ಇಬ್ಬರೂ ಮನೆಗೆ ಬಂದಿದ್ದನ್ನು ತಿಳಿಸುತ್ತಾರೆ. ಅದೇ ಫೋನ್‌ನಲ್ಲಿ ಮೇಳಕುಂದಿ, ಕಾಶೀನಾಥ ಅವರೊಂದಿಗೆ ಮಾತನಾಡಿದ ಸಾಲಿ, ‘ಪ್ರಕರಣ ಮುಚ್ಚಿಹಾಕಲು ₹80 ಲಕ್ಷ ಕೊಡಬೇಕು’ ಎಂದು ಬೇಡಿಕೆ ಇಡುತ್ತಾರೆ. ಆದರೆ, ಅಷ್ಟು ಕೊಡಲು ಆಗುವುದಿಲ್ಲ. ₹10 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದಕ್ಕೆ ಒಪ್ಪುತ್ತಾರೆ. ಅದಾದ ಎರಡು ದಿನದ ಬಳಿಕ ₹500 ಮುಖಬೆಲೆಯ ₹10 ಲಕ್ಷ ಮೊತ್ತದ 20 ಬಂಡಲ್ ನೋಟುಗಳನ್ನು ಪಾಟೀಲಗೆ ತಲುಪಿಸುತ್ತಾರೆ. ಅದೇ ದಿನ ರಾತ್ರಿ ಈ ಹಣವನ್ನು ಕಲಬುರಗಿಯ ಉದನೂರ ರಸ್ತೆಯಲ್ಲಿ ಸಾಲಿ ಅವರಿಗೆ ತಲುಪಿಸಿದ್ದಾಗಿ ಪಾಟೀಲ ಒಪ್ಪಿಕೊಂಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಚಾರ್ಜ್ ಶೀಟ್‌ನಲ್ಲಿ ದಾಖಲಿಸಿದ್ದಾರೆ.


Spread the love

About Laxminews 24x7

Check Also

ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Spread the love ಕಲಬುರಗಿ: ರಾಜ್ಯ ಸರಕಾರ ಪೆಟ್ರೋಲ್, ಡಿಸೆಲ್ ದರ ಏರಿಕೆ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ