ವಿಜಯಪುರ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮುಖ್ಯಮಂತ್ರಿ ತಕ್ಷಣ ಮಧ್ಯಪ್ರವೇಶಿಸಿ ಕಡಿವಾಣ ಹಾಕಬೇಕು ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಆಗ್ರಹಿಸಿದೆ.
ವಿಜಯಪುರದಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗದ ಅಬಕಾರಿ ಸನ್ನದುದಾರರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಸ್.ಗುರುಸ್ವಾಮಿ, ರಾಜ್ಯದಲ್ಲಿ ಅಬಕಾರಿ ಅಧಿಕಾರಿಗಳು ಅಬಕಾರಿ ಕಾಯ್ದೆಯಲ್ಲಿರುವ ಲೋಪದೋಷಗಳ ಲಾಭ ಪಡೆದು ಮಾರಾಟಗಾರರನ್ನು ಹಿಂಸಿಸಿ ‘ಮಾಮೂಲಿ’ (ಲಂಚ) ಹಣವನ್ನು ಬಲತ್ಕಾರವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಸರ್ಕಾರದ ವರಮಾನದ ವಿಷಯವನ್ನು ಬದಿಗಿಟ್ಟು ಸ್ವಂತ ಸಂಪಾದನೆಯತ್ತ ಸಂಪೂರ್ಣ ಗಮನ ನೀಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಡಾಬಾ, ಬೀಡಾ ಅಂಗಡಿ ಮತ್ತಿತರರ ಕಡೆಗಳಲ್ಲಿ ನಕಲಿ, ಗೋವಾ, ಮಿಲಿಟರಿ, ಡ್ಯೂಟಿ ಫ್ರೀ ಹೆಸರಿನಲ್ಲಿ ತೆರಿಗೆ ರಹಿತ ಮದ್ಯ ಮಾರಾಟ ಆಗುತ್ತಿದೆ ಎಂದು ದೂರಿದರು.
ಅಬಕಾರಿ ಇಲಾಖೆಯ ಹಲವು ಅಧಿಕಾರಿಗಳೇ ಬೇನಾಮಿ ಮದ್ಯಮಾರಾಟ ಸನ್ನದುಗಳನ್ನು ಹೊಂದಿದ್ದಾರೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿಗೂ ಅಧಿಕ ನಷ್ಠವಾಗುತ್ತಿದೆ. ಅಧಿಕಾರಿಗಳ ಮಿತಿ ಮೀರಿದ ಭ್ರಷ್ಟಾಚಾರದಿಂದ ಸನ್ನದುದಾರ ವ್ಯವಹಾರಿಕವಾಗಿ ಅವನತಿಯತ್ತ ಸಾಗುತ್ತಿದ್ದಾನೆ. ಅಬಕಾರಿ ಭ್ರಷ್ಟಾಚಾರದ ಕುರಿತು ಸರ್ಕಾರ ತುರ್ತು ಗಮನಹರಿಸಬೇಕು ಎಂದು ಮನವಿ ಮಾಡಿದರು.
ಅಬಕಾರಿ ಅಧಿಕಾರಿಗಳ ಹಿಂಸೆಯನ್ನು ತಾಳಲಾರದೇ ಸರ್ಕಾರಕ್ಕೆ ಮನವಿ ನೀಡಿದರೂ ಯಾವುದೇ ಕ್ರಮ ಆಗಿಲ್ಲ. ಪರಿಸ್ಥಿತಿ ಸುಧಾರಿಸುವ ಬದಲು ಭಷ್ಟಾಚಾರ ಇನ್ನೂ ಹೆಚ್ಚಳವಾಗಿದೆ ಎಂದು ಗಂಭೀರ ಆರೋಪ ಮಾಡಿದರು.