ವಿಜಯಪುರ: ವಿಜಯಪುರದಲ್ಲಿ ಇದೇ 8ರಂದು ನಡೆದಿದ್ದ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ಏಕ್ತಾ ನಗರ ನಿವಾಸಿ ಪ್ರಕಾಶ ಹಳ್ಳಿ(40)ಮನೆಯಲ್ಲೇ ಕೊಲೆಯಾಗಿತ್ತು. ತನ್ನ ಪತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ, ಅಂಗನವಾಡಿ ಟೀಚರ್ ರಾಜೇಶ್ವರಿ ಹೊಸಮನಿ ಗೋಳೋ ಎಂದು ಅತ್ತಿದ್ದಳು.
ಆದರೆ ಇದು ಸಹಜ ಸಾವಲ್ಲ, ಬದಲಿಗೆ ಪತ್ನಿಯೇ ಕೊಲೆ ಮಾಡಿರುವುದು ಎಂದು ತಿಳಿದುಬಂದಿದೆ.
30 ವರ್ಷದ ರಾಜೇಶ್ವರಿ ಅಂಗನವಾಡಿಯಲ್ಲಿ ಟೀಚರ್ ಆಗಿದ್ದಾಳೆ. ಈಕೆ 24 ವರ್ಷದ ರವಿ ತಳವಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೇಮಕ್ಕೆ ಪತಿ ಪ್ರಕಾಶ ಅಡ್ಡಿಯಾಗುತ್ತಿದ್ದರು ಎನ್ನುವ ಕಾರಣಕ್ಕೆ ಊಟದಲ್ಲಿ ನಿದ್ದೆಮಾತ್ರೆ ಕೊಟ್ಟು ನಂತರ ಸಾಯಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರಾಜೇಶ್ವರಿ ಹೊಸಮನಿ, ರವಿ ತಳವಾರ ಜತೆ ಇವರಿಗೆ ಸಹಕರಿಸಿರುವ ಗುರುಪಾದ ದಳವಾಯಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ವರ್ಷಗಳಿಂದ ಪ್ರಿಯಕರ ರವಿ ತಳವಾರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ರಾಜೇಶ್ವರಿ. ಈ ಹಿಂದೆ ಮೂರು ಬಾರಿ ತಿಂಗಳುಗಟ್ಟಲೇ ರವಿ ಜೊತೆ ಓಡಿ ಹೋಗಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಗಲಾಟೆ ಆಗುತ್ತಿತ್ತು. ಜೂನ್ 8ರ ರಾತ್ರಿ ಮನೆಗೆ ಬಂದ ಗಂಡನಿಗೆ ಚಿಕನ್ ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಳು.
ರಾತ್ರಿ ಪ್ರಕಾಶ ನಿದ್ರೆಗೆ ಜಾರಿದ ಬಳಿಕ ಪ್ರಿಯಕರ ರವಿ ಹಾಗೂ ಆತನ ಸ್ನೇಹಿತ ಗುರುಪಾದನನ್ನು ಫೋನ್ ಮಾಡಿ ಕರೆಸಿದ್ದಳು ಈಕೆ. ಪ್ರಕಾಶ ಎದೆಯ ಮೇಲೆ ಕುಳಿತಿದ್ದ ರವಿ, ಕಾಲು ಹಿಡಿದುಕೊಂಡಿದ್ದ ರಾಜೇಶ್ವರಿ, ವೇಲ್ ನಿಂದ ಕತ್ತಿಗೆ ಬಿಗಿದಿದ್ದ ಗುರುಪಾದ. ಮೂವರು ಆರೋಪಿಗಳು ಸೇರಿ ಪ್ರಕಾಶ ಕೊಲೆ ಮಾಡಿದ್ದರು.
ರಾತ್ರಿಯಿಡಿ ಗಂಡನ ಶವದೊಂದಿಗೆ ಇದ್ದು, ಬೆಳಗ್ಗೆದ್ದು ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಬಿಂಬಿಸಿದ್ದಳು ರಾಜೇಶ್ವರಿ. ಗಂಡನ ಮನೆಯವರಿಗೆ ಸಂಶಯ ಬಂದು ದೂರು ನೀಡಿದ ಬಳಿಕ ಪೊಲೀಸರ ತನಿಖೆಯಲ್ಲಿ ಕೊಲೆಯಾಗಿರುವುದು ಬಹಿರಂಗಗೊಂಡಿದೆ.
Laxmi News 24×7