ಹುಬ್ಬಳ್ಳಿ: ಬಿಜೆಪಿಗೆ ಸೇರುವ ಹಾಗೂ ಜೆಡಿಎಸ್ ತೊರೆಯುವ ಅನಿವಾರ್ಯತೆ ನನಗಿರಲಿಲ್ಲ. ನನ್ನ ಕ್ಷೇತ್ರದ ಶಿಕ್ಷಕರು, ಹಿತೈಷಿಗಳು ಬಿಜೆಪಿ ಸೇರ್ಪಡೆಯಾಗುವ ಬಲವಾದ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ. ಎಲ್ಲೇ ಇದ್ದರೂ ಪಕ್ಷದ ಶಿಸ್ತು, ನಿಯಮಗಳಿಗೆ ಬದ್ಧನಾಗಿರುವೆ ಎಂದು ವಿಧಾನ ಪರಿಷತ್ತು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಶುಕ್ರವಾರ ಇಲ್ಲಿನ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಶಕಗಳಲ್ಲಿ ಏಳು ಚುನಾವಣೆಗಳನ್ನು ಪಕ್ಷೇತರ ಹಾಗೂ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದೇನೆ. ರಾಜಕೀಯ ಜೀವನದಲ್ಲಿ ಎಲ್ಲಾ ಪಕ್ಷದ ನಾಯಕರೊಂದಿಗೆ ಉತ್ತವ ಬಾಂಧವ್ಯ ಹೊಂದಿದ್ದೇನೆ. ಬಿಜೆಪಿಗೆ ಸೇರ್ಪಡೆ ಕುರಿತು ಅಭಿಪ್ರಾಯ ಸಲಹೆಗಳು ಬಂದಾಗ ನಾಲ್ಕು ಜಿಲ್ಲೆಯ ಶಿಕ್ಷಕರು, ಹಿತೈಷಿಗಳೊಂದಿಗೆ ಸಭೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಚುನಾವಣೆ ದೃಷ್ಟಿಯಿಂದ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಇನ್ನು ಉಳಿದಿರುವ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಬಲ್ಲದು ಎನ್ನುವ ಉದ್ದೇಶ ನನ್ನಲ್ಲಿದೆ ಎಂದರು.
ನಾಮಪತ್ರ ಸಲ್ಲಿಕೆ: ಹಿಂದಿನಿಂದ ಬಂದಿರುವಂತೆ ಮೊದಲಿಗೆ ಕುಟುಂಬ ಹಾಗೂ ಪ್ರಮುಖ ಶಿಕ್ಷಕರೊಂದಿಗೆ ನಾಮಪತ್ರ ಹಾಗೂ ನಂತರ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುವುದು. ಬಹುತೇಕ ಮೇ 23 ರಂದು ಕುಟುಂಬ ಸಮೇತ ನಾಮಪತ್ರ ಸಲ್ಲಿಸಲಾಗುವುದು. ಒಂದು ವೇಳೆ 23 ರಂದು ಆಗದಿದ್ದರೆ 24 ಕ್ಕೆ ಸಲ್ಲಿಸುತ್ತೇವೆ. ಮೇ 26 ರಂದು ಪಕ್ಷದ ನಾಯಕರೊಂದಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
Laxmi News 24×7