ಶಿವಮೊಗ್ಗ: ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವ ಕನಸು ದಶಕಗಳು ಕಳೆದರೂ ನನಸಾಗಿಲ್ಲ. ಜಿಲ್ಲೆಗೆ ಸರಕು ಹೊತ್ತು ತರುವ ಲಾರಿಗಳ ಚಾಲಕರು ರಸ್ತೆ ಬದಿಯಲ್ಲೇ ಸಮಯ ಕಳೆಯುತ್ತಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರು 2008-11ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಟ್ರಕ್ ಟರ್ಮಿನಲ್ ನಿರ್ಮಿಸುವ ಪ್ರಸ್ತಾಪಕ್ಕೆ ಮತ್ತೆ ಜೀವ ಬಂದಿತ್ತು.
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಸಾಗರ ರಸ್ತೆ, ಸೋಮಿನಕೊಪ್ಪ ರಸ್ತೆಯಲ್ಲಿ ಸ್ಥಳ ಹುಡುಕಾಟವೂ ನಡೆದಿತ್ತು. ಆದರೆ, ಯೋಜನೆ ನನೆಗುದಿಗೆ ಬಿದಿತ್ತು.
ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷರಾಗಿ ಡಿ.ಎಸ್. ವೀರಯ್ಯ ಅಧಿಕಾರ ವಹಿಸಿಕೊಂಡ ನಂತರ ಶಿವಮೊಗ್ಗಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳ ಸಭೆ ನಡೆಸಿದ್ದರು. ಶಿವಮೊಗ್ಗ ಸುತ್ತಮುತ್ತ ಸೂಕ್ತ ಜಾಗ ಗುರುತಿಸಿದರೆ ಟರ್ಮಿನಲ್ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ, ಆರ್‌ಐ, ಗ್ರಾಮ ಲೆಕ್ಕಿಗರು ಸೇರಿ ತಳಮಟ್ಟದ ಅಧಿಕಾರಿಗಳ ಸಭೆ ಕರೆದು
ಶಿವಮೊಗ್ಗ ಸುತ್ತಮುತ್ತ ಜಾಗ ಗುರುತಿಸುವಂತೆ ಸೂಚಿಸಿದ್ದರು. ಸರ್ಕಾರಿ ಜಮೀನು ಗುರುತಿಸುವುದು ಉತ್ತಮ. ಅದು ಲಭ್ಯವಿಲ್ಲದಿದ್ದರೆ ನಗರೋತ್ಥಾನ
ಅಥವಾ ಕೆಐಎಡಿಬಿ ಜಾಗವನ್ನು ಗುರುತಿಸಬೇಕು. ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತ 2ರಿಂದ 5 ಕಿ.ಮೀ. ಒಳಗೆ ಜಾಗವಿರಬೇಕು. ತಹಶೀಲ್ದಾರರು, ನಗರಾಭಿವೃದ್ಧಿ ಮತ್ತು ಕೆಎಐಡಿಬಿ ಅಧಿಕಾರಿಗಳು ಜಾಗ ಗುರುತಿಸಲು ಸಹಕರಿಸಬೇಕು ಎಂದು ಸೂಚಿಸಿದ್ದರು.