ಬೆಂಗಳೂರು: ಸಿಐಡಿ ಕಚೇರಿ ಆವರಣದಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಕಚೇರಿಯಲ್ಲೇ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಅಕ್ರಮ ನೇಮಕಾತಿ ‘ಕಳ್ಳಾಟ’ ನಡೆದಿರುವ ಸ್ಪೋಟಕ ಮಾಹಿತಿ ಜತೆಯಲ್ಲೇ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ಗಳ (ಪಿಡಬ್ಲ್ಯುಡಿ) ನೇಮಕಾತಿಯಲ್ಲೂ ಅಕ್ರಮ ನಡೆದಿತ್ತೆಂಬ ಮತ್ತೊಂದು ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.
ಸಿಐಡಿ ಕಚೇರಿಯ ಸ್ಟ್ರಾಂಗ್ ರೂಂನಲ್ಲಿ ಇರಿಸಿದ್ದ ಓಎಂಆರ್ ಶೀಟ್ಗಳನ್ನು ನೇಮಕಾತಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ರಾತ್ರೋರಾತ್ರಿ ತಿದ್ದಿರುವುದು ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿದೆ.
ಏತನ್ಮಧ್ಯೆ ಪಿಎಸ್ಐ ನೇಮಕ ಅಕ್ರಮದಲ್ಲಿ ಬಂಧಿತನಾಗಿರುವ ಕಿಂಗ್ಪಿನ್ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಮುಖಂಡ ರುದ್ರೇಗೌಡ ಪಾಟೀಲನನ್ನು ಪಿಡಬ್ಲ್ಯುಡಿ ನೇಮಕಾತಿ ಹಗರಣದ ತನಿಖೆಗಾಗಿ ಬೆಂಗಳೂರಿನ ಅನ್ನಪೂಣೇಶ್ವರಿನಗರ ಪೊಲೀಸರು ಬುಧವಾರ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಪಿಡಬ್ಲ್ಯುಡಿ ಅಕ್ರಮದಲ್ಲಿ ಭಾಗಿಯಾಗಿರುವ ಇನ್ನಷ್ಟು ಜನರ ಹೆಸರುಗಳನ್ನು ರುದ್ರೇಗೌಡ ಪಾಟೀಲ್ ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂನಲ್ಲೇ ಗೋಲ್ಮಾಲ್ ನಡೆದಿದೆ. ಅದರಲ್ಲೂ ಸ್ಟ್ರಾಂಗ್ ರೂಂ ಉಸ್ತುವಾರಿಗೆ ನಿಯೋಜನೆಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯೇ ಓಎಂಆರ್ ಶೀಟ್ ತಿದ್ದಿದ್ದಾರೆ. ಈಗ ಅಕ್ರಮದಲ್ಲಿ ಕೆಳ ಹಂತದ ಸಿಬ್ಬಂದಿ ಸಿಐಡಿ ಬಲೆಗೆ ಬಿದ್ದ ಬೆನ್ನಲ್ಲೇ ಹಿರಿಯ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಮೇಲಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ದೊಡ್ಡ ಮಟ್ಟದ ಹಗರಣ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಪೊಲೀಸ್ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇಲೆಯೇ ಕೆಳಹಂತದ ಸಿಬ್ಬಂದಿ ಅಕ್ರಮ ಎಸಗಿದ್ದಾರೆ ಎಂದು ಪೊಲೀಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ.