ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ.17 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ನಾಯಕರಾದ ಕಾ.ಎಂ ಉಮಾದೇವಿ ಹೇಳಿದರು.
ಪಟ್ಟಣದ ಜಿಜೆಸಿಪಿ ಕಾಲೇಜು ಬಳಿ ನಡೆದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು, ನಿಗದಿತ ವೇತನವಿಲ್ಲದೆ ಅನಿಶ್ಚಿತೆಯಿಂದ ಬದುಕುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ವೇತನದ ಭದ್ರತೆ ಕಲ್ಪಿಸಬೇಕು, ಆರ್ ಸಿ ಎಚ್ ಪೋರ್ಟಲ್ ಮೂಲಕ ನೀಡಲಾಗುತ್ತಿರುವ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ನಿಗದಿತ ಅವಧಿಯೊಳಗೆ ಆಶಾ ಕಾರ್ಯಕರ್ತೆಯರಿಗೆ ತಲುಪುವಂತಾಗಬೇಕು, ಕಳೆದ ಐದಾರು ವರ್ಷಗಳಿಂದ ಸೂಕ್ತ ಸಮಯದಲ್ಲಿ ವಿತರಣೆಯಾಗದಿರುವ ಪ್ರೋತ್ಸಾಹಧನ ಹಣವನ್ನು ಒಟ್ಟಿಗೆ ನೀಡಬೇಕು ಸೇರಿದಂತೆ ಆಶಾ ಕಾರ್ಯಕರ್ತೆಯರ ಹಲವು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ರಾಜ್ಯದ 31 ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕೆಂದು ಮನವಿ ಮಾಡಿದರು.