ಬೆಳಗಾವಿ: ‘ಭಾರತಮಾಲಾ ಯೋಜನೆಯಲ್ಲಿ ಕೈಗೊಳ್ಳುತ್ತಿರುವ ಪಣಜಿ-ಹೈದರಾಬಾದ್ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಬೆಳಗಾವಿ-ಹುನಗುಂದ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು’ ಎಂದು ಒತ್ತಾಯಿಸಿ ರೈತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬಳಿಕ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
‘ಈ ಹೆದ್ದಾರಿ ನಿರ್ಮಾಣಕ್ಕಾಗಿ ಸರ್ಕಾರ ಬೆಳಗಾವಿ ತಾಲ್ಲೂಕಿನ ಬಸ್ತವಾಡ, ಕಮಕಾರಟ್ಟಿ, ಶಗನಮಟ್ಟಿ, ತಾರೀಹಾಳ, ಚಂದನಹೊಸೂರ, ಗಣಿಕೊಪ್ಪ, ಮರಿಕಟ್ಟಿ, ಹಣ್ಣಿಕೇರಿ, ಜಕನಾಯ್ಕನಕೊಪ್ಪ, ನಾಗನೂರ ಮತ್ತಿತರ ಗ್ರಾಮಗಳ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಹಲವು ಕೈಗಾರಿಕೆಗಳು ಮತ್ತು ರಸ್ತೆಗಳ ನಿರ್ಮಾಣಕ್ಕೆ ಭೂಮಿ ನೀಡಿದ್ದೇವೆ. ಈಗ ಬದುಕಿಗೆ ಆಸರೆಯಾಗಿರುವ ಅತ್ಯಲ್ಪ ಕೃಷಿ ಜಮೀನನ್ನೂ ಸ್ವಾಧೀನಪಡಿಸಿಕೊಳ್ಳಬಾರದು’ ಎಂದು ಆಗ್ರಹಿಸಿದರು.