80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ರಾಜ್ಯದ ಮೊದಲ ತೇಲುವ ಸೇತುವೆ (Floating bridge) ಉದ್ಘಾಟನೆಗೊಂಡ ನಾಲ್ಕೇ ದಿನಕ್ಕೆ ತುಂಡಾಗಿದೆ.
ಮಲ್ಪೆ ಬೀಚ್ ನಲ್ಲಿ ತಲೆ ಎತ್ತಿದ್ದ ಸೇತುವೆ ಸಮುದ್ರದ ಅಲೆಗಳ ರಭಸಕ್ಕೆ ಹಾನಿಗೀಡಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರವಾಸಿಗರಿಗೆ ತೊಂದರೆ ಆಗಿಲ್ಲ.
ಸಮುದ್ರದ ಅಲೆಗಳೊಂದಿಗೆ ತೇಲುವ ಈ ಸೇತುವೆ 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ವಿಸ್ತೀರ್ಣ ಹೊಂದಿತ್ತು. ಸೇತುವೆಯ ಎರಡು ಕಡೆಗಳಲ್ಲಿ ರೇಲಿಂಗ್ ಸಿಸ್ಟಮ್ ಅಳವಡಿಸಲಾಗಿತ್ತು.
ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯಲ್ಲಿ 10 ಮಂದಿ ಲೈಫ್ ಗಾರ್ಡ್, 30 ಲೈಫ್ ಬ್ಯಾಗ್ಸ್ ಹೊಂದಿತ್ತು. ಆದರೆ ಆಸಿನ್ ಚಂಡಮಾರುತದ ಹೊಡೆತಕ್ಕೆ ತೇಲುವ ಸೇತುವೆ ಹಾನಿಗೀಡಾಗಿದೆ.
ಕೇರಳದ ಬೇಪೂರ್ ಬೀಚ್ ನಲ್ಲಿ ತೇಲುವ ಸೇತುವೆ ಇದೆ. ಕರ್ನಾಟಕದಲ್ಲಿ ಇದೇ ಮೊದಲ ತೇಲುವ ಸೇತುವೆಯಾಗಿ ಶುಕ್ರವಾರ ಲೋಕಾರ್ಪಣೆಗೊಂಡಿತ್ತು.