ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿವೆ.
“ಉದಯವಾಣಿ’ ಕಳೆದ ಏ.20ರಂದು “ಎಂ.ಬಿ.ಪಾಟೀಲ ವಿರುದ್ಧ ಲಕ್ಷ್ಮಣ ಸವದಿ ಸ್ಪರ್ಧೆ?’ ಎಂಬ ತಲೆಬರಹದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಇದೀಗ ಸಾಕಷ್ಟು ಸದ್ದು ಮಾಡಿದೆ.
“ಬಬಲೇಶ್ವರ ಕ್ಷೇತ್ರದಲ್ಲಿ ಮೋದಿ ಬಂದ್ರೂ ಏನೂ ಮಾಡಿಕೊಳ್ಳಲಾಗಿಲ್ಲ, ಮಣಿಸಲಾಗಿಲ್ಲ.
ಇನ್ನ ಸವದಿ ಬಂದೇನ್ ಮಾಡ್ತಾನ್’ ಎಂದು ಬಬಲೇಶ್ವರ ಹಾಲಿ ಶಾಸಕರೂ ಆಗಿರುವ ಮಾಜಿ ಮಂತ್ರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಬೆಂಬಲಿಗರು ತಿರುಗೇಟು ನೀಡುತ್ತಿದ್ದಾರೆ.
ಪಾಟೀಲ ಅವರು ಸಾರ್ವಜನಿಕ ವೇದಿಕೆಗಳು ಹಾಗೂ ಸಾರ್ವಜನಿಕ ಸಮಾರಂಭಗಳು ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಮಾಡಿರುವ ಭಾಷಣಗಳನ್ನು ಹಾಗೂ “ಉದಯವಾಣಿ’ ವಿಶೇಷ ವರದಿಯ ತುಣಕನ್ನು ಸಂಕಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
ಸವದಿ ವಿರುದ್ಧ ಬರ್ತದ ಪಾಳಿ, ನಾನು ಕೈ ಹಚ್ಚಿದ್ರ ಬಾಳಷ್ಟು ಕೈ ಹಚ್ಚಾಕ ಬರತೈತಿ. ನನ್ನ ಹೊಡತಕ್ಕ ಎಂತೆಂಥವ್ರೋ ತಾಳಿಲ್ಲ, ಏನ್ರಿ..! ಸವದಿ ಯಾವ ಲೆಕ್ಕ. ಲಕ್ಷ್ಮಣ ಸವದಿ ಬಾಯಿ ಹರಕ ಕೌದಿ..! ಹೀಗೆ ಎಂ.ಬಿ. ಪಾಟೀಲ ಅವರು ಮಾಡಿರುವ ಟೀಕಾಸ್ತ್ರಗಳ ಎಡಿಟ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಯಾರು ತಲೆ ಕೆಳಗ ಮಾಡಿ, ಕಾಲ ಮ್ಯಾಲೆ ಮಾಡಿ ನಿಂತ್ರೂ ಎಂ.ಬಿ. ಪಾಟೀಲಗೆ ಏನೂ ಹಾನಿಯಾಗಲ್ಲ. ಬಬಲೇಶ್ವರ ಕ್ಷೇತ್ರದಲ್ಲಿ ಯಾರೇ ಬಂದ್ರೂ..ಯಾರೆ ಬಂದ್ರೂ ಎಂದು ಬರೆದುಕೊಳ್ಳಿ.. ನನಗೇನೂ ಫರಕ ಆಗಲ್ಲ, ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.. ಐದು ವರ್ಷ ನಾನೇನು ಕೆಲಸ ಮಾಡದೇ ಕುಳಿತಿಲ್ಲ.. ಹರಿ ಬ್ರಹ್ಮ, ವಿಷ್ಣು ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಬದಲಾಗಿ 50 ಸಾವಿರ ಮತಗಳಿಂದ ಮತ್ತೆ ಗೆದ್ದು ತೋರಿಸುತ್ತೇನೆ..! ಇಂಥ ಹೇಳಿಕೆಗಳ ವಿಡಿಯೋ ತುಣುಕುಗಳೊಂದಿಗೆ “ಉದಯವಾಣಿ’ ವಿಶೇಷ ವರದಿ ಎಡಿಟ್ ಮಾಡಿದ ವಿಡಿಯೋಗಳು ಬಬಲೇಶ್ವರ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿವೆ.