ಬೆಂಗಳೂರು: ಅವಧಿ ಮುಕ್ತಾಯವಾದ ಒಂದು ಗ್ರಾಮ ಪಂಚಾಯಿತಿ ಹಾಗೂ ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಯಾಗದ ಕಾರಣಕ್ಕೆ ಚುನಾವಣೆ ನಡೆಯದ 2 ಗ್ರಾಮ ಪಂಚಾಯಿತಿಗಳು ಸೇರಿದಂತೆ ವಿವಿಧ ಕಾರಣಗಳಿಗೆ ತೆರವಾಗಿದ್ದ 201 ಗ್ರಾ.ಪಂ. ಸದಸ್ಯ ಸ್ಥಾನಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಅವಧಿ ಮುಕ್ತಾಯವಾಗಿರುವ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಹಾಗೂ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರ ಬಾರದೇ ಇರುವ ಕಾರಣಕ್ಕೆ ಚುನಾವಣೆ ನಡೆಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು, ಬಾಗಕಲೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಿಗಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ಇದೇ ವೇಳೆ ವಿವಿಧ ಕಾರಣಗಳಿಂದ ತೆರವಾಗಿರುವ ಹಲವು ಗ್ರಾಮ ಪಂಚಾಯಿತಿಗಳ 201 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ವೇಳಾಪಟ್ಟಿ :
ಮೇ 5- ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟ.
ಮೇ 10- ನಾಮಪತ್ರ ಸಲ್ಲಿಕೆಗೆ ಕೊನೆ ದಿನ.
ಮೇ 11-ನಾಮಪತ್ರಗಳ ಪರಿಶೀಲನೆ.
ಮೇ 13-ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ.
ಮೇ 20- ಮತದಾನ (ಬೆಳಿಗ್ಗೆ 7ರಿಂದ ಸಂಜೆ 5).
ಮೇ 22- ಮತ ಎಣಿಕೆ-ಫಲಿತಾಂಶ.