Breaking News

ರಾಜ್ಯದಲ್ಲಿ ಯುಪಿ ಮಾದರಿ ಚುನಾವಣೆಗೆ ಬಿಜೆಪಿ ಸಿದ್ಧತೆ

Spread the love

ಬೆಂಗಳೂರು: ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಮರಳಿ ಅಧಿಕಾರ ಪಡೆದಿರುವ ಬಿಜೆಪಿ, ದಕ್ಷಿಣದ ಹೆಬ್ಟಾಗಿಲು ಕರ್ನಾಟಕದಲ್ಲೂ ಅಧಿಕಾರ ಉಳಿಸಿಕೊಳ್ಳಲು ಉತ್ತರ ಪ್ರದೇಶ ಮಾದರಿಯನ್ನು ಅಳವಡಿಸಲು ನಿರ್ಧರಿಸಿದೆ.

ಅದಕ್ಕಾಗಿ ಅಭಿವೃದ್ಧಿ ಮಂತ್ರವನ್ನೇ ಮುಂದಿಟ್ಟುಕೊಂಡು “ಸೈಲೆಂಟ್‌ ಓಟರ್‌’ಗಳನ್ನು ಗಟ್ಟಿಗೊಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ.

ರಾಜ್ಯದ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಮೂರಂಕಿ ಮುಟ್ಟುವುದು ಕಷ್ಟ ಎಂಬ ಮಾಹಿತಿ ಪಕ್ಷದ ವರಿಷ್ಠರಿಗೆ ಲಭ್ಯವಾಗಿದ್ದು, 150 ಸ್ಥಾನಗಳ ಗುರಿ ಮುಟ್ಟಲು ಉತ್ತರ ಪ್ರದೇಶ ಮಾದರಿ ಅನುಸರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏನಿದು ಯುಪಿ ಮಾದರಿ? :

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಐದು ವರ್ಷಗಳ ಆಡಳಿತದ ಬಗ್ಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಯೋಗಿ ಹಿಂದುತ್ವದ ಉಗ್ರ ಪ್ರತಿಪಾದಕರಾಗಿದ್ದರು. ಅವರು ಐದು ವರ್ಷಗಳಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ ಹಾಗೂ ಅವರಿಂದ ಬೇರೆ ಯಾವ ಬೇಡಿಕೆಗಳಿವೆ ಎಂದು ಫ‌ಲಾನುಭವಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಮನೆಗೆ ಭೇಟಿ :

ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಅರ್ಹರಿಗೆ ಸುಲಭವಾಗಿ ತಲುಪಿಸಲಾಗಿದೆ. ಇದಕ್ಕಾಗಿ ಯಾರಿಗೂ ಲಂಚ ನೀಡಿಲ್ಲ ಹಾಗೂ ಫ‌ಲಾನುಭವಿಗಳು ಸರಕಾರಿ ಕಚೇರಿಗಳಿಗೆ ಅಲೆದಿಲ್ಲ. ಯೋಜನೆಗಳು ನೇರವಾಗಿ ಫ‌ಲಾನುಭವಿಗಳ ಮನೆಗೇ ತಲುಪಿದೆ. ಈ ಯೋಜನೆಗಳ ಫ‌ಲಾನುಭವಿಗಳು ಪ್ರತಿಯೊಂದು ಮನೆಯಲ್ಲೂ ಇದ್ದಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ.

ಪ್ರಮುಖವಾಗಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ಹಣವು ನೇರವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗುತ್ತಿದೆ. ಉಜ್ವಲ ಯೋಜನೆ ಮೂಲಕ ಉಚಿತ ಅಡುಗೆ ಅನಿಲ ವಿತರಣೆ, ಕೊರೊನಾ ಸಂದರ್ಭದಲ್ಲಿ ಉಚಿತ ಆಹಾರ ಪದಾರ್ಥ ವಿತರಣೆ, ವೃದ್ಧಾಪ್ಯ, ವಿಧವಾ ವೇತನ ಹೆಚ್ಚಳ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ವಿವಿಧ ಯೋಜನೆಗಳಡಿಯಲ್ಲಿ ಮನೆ ನಿರ್ಮಾಣ ಮುಂತಾದ ಯೋಜನೆಗಳ ಫ‌ಲಾನುಭವಿಗಳನ್ನು ನೇರವಾಗಿ ಭೇಟಿ ಮಾಡುವ ಕಾರ್ಯ ಆರಂಭವಾಗಿದೆ.

ಸರಕಾರದ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ? ಅರ್ಹ ಫ‌ಲಾನುಭವಿಗಳಿದ್ದರೂ, ಯೋಜನೆಗಳು ತಲುಪುವಲ್ಲಿ ಆಗಿರುವ ಲೋಪಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಬಿಜೆಪಿಯ ಪ್ರತಿ ಬೂತ್‌ ಮಟ್ಟದಲ್ಲಿರುವ ಪಕ್ಷದ ಪೇಜ್‌ ಪ್ರಮುಖರು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಒಂದು ಪೇಜ್‌ಗೆ ಆರು ಪ್ರಮುಖರು ಫ‌ಲಾನುಭವಿಗಳಿಗೆ ತಲುಪಿರುವ ಯೋಜನೆಗಳ ಮಾಹಿತಿ ಪಡೆಯುವುದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೊಡುಗೆಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಆರಂಭಿಸಿದ್ದಾರೆ. ಜತೆಗೆ ಅವರ ಬೇಡಿಕೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಶೇ. 25ರಷ್ಟು ಪೇಜ್‌ ಪ್ರಮುಖರು ಫ‌ಲಾನುಭವಿಗಳ ಮನೆಗಳನ್ನು ತಲುಪಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ