ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಬಗೆದಷ್ಟು ಆಳಕ್ಕೆ ಹೋಗ್ತಿದೆ.
ಅಕ್ರಮದ ಮತ್ತೋರ್ವ ಕಿಂಗ್ ಪಿನ್ ಮಂಜುನಾಥ ಮೇಳಕುಂದಿ ನಾಪತ್ತೆಯಾಗಿದ್ದಾರೆ. ಕಲಬುರಗಿ ನೀರಾವರಿ ಇಲಾಖೆಯ ಸಹಾಯಕ ಇಂಜನೀಯರ್ ಮಂಜುನಾಥ ಮೇಳಕುಂದಿ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ. ಕಲಬುರಗಿ ನಗರದ ಎನ್ಜಿಒ ಕಾಲೋನಿ ನಿವಾಸಿ ಮಂಜುನಾಥ, ಕಲಬುರಗಿ ಜಿಲ್ಲೆಯ ಸೇಡಂ ನಿವಾಸಿ ವಿರೇಶ್ ಅನ್ನೋ ಅಭ್ಯರ್ಥಿಯಿಂದ ಬರೋಬ್ಬರಿ 39 ಲಕ್ಷ ಹಣ ಪಡೆದಿದ್ದ. ವಿರೇಶ್, ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. ಇಡೀ ಪ್ರಕರಣ ಬೆಳಕಿಗೆ ಬಂದಿದ್ದೆ ವಿರೇಶ್ ಅನ್ನೋ ಅಭ್ಯರ್ಥಿ ಬಂಧನದ ನಂತರ. ಸದ್ಯ ವಿಚಾರಣೆ ವೇಳೆ ತಾನು ಮಂಜುನಾಥ ಅನ್ನೋನಿಗೆ 39 ಲಕ್ಷ ಹಣ ನೀಡಿರೋದಾಗಿ ವಿರೇಶ್ ತಪ್ಪೊಪ್ಪಿಕೊಂಡಿದ್ದಾನೆ. ಪಿಎಸ್‌ಐ ಪರೀಕ್ಷೆ ಅಕ್ರಮವಾಗಿ ಪಾಸ್ ಮಾಡಿಸಲು ಹಣ ನೀಡಿರೋದಾಗಿ ವಿರೇಶ್ ಹೇಳಿಕೆ ನೀಡಿದ್ದಾನೆ. ವಿರೇಶ್ ಮಾಹಿತಿ ಮೇರೆಗೆ ಮಂಜುನಾಥನನ್ನು ಸಿಐಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆದ್ರೆ ಕಳೆದ ಕೆಲ ದಿನಗಳಿಂದ ಮಂಜುನಾಥ ನಾಪತ್ತೆಯಾಗಿದ್ದಾನೆ.
ಸಿಐಡಿ ಮಂಜುನಾಥ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದು ಮಂಜುನಾಥ ಮನೆಯಲ್ಲಿ ಅನೇಕ ಪರೀಕ್ಷೆಯ ಹಾಲ್ ಟಿಕೆಟ್ಗಳು ಪತ್ತೆಯಾಗಿವೆ. ಬೇರೆ ಬೇರೆ ಅಭ್ಯರ್ಥಿಗಳ ಹಾಲ್ ಟಿಕೆಟ್ಗಳು ಸಿಕ್ಕಿವೆ. ಅಕ್ರಮವಾಗಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳನ್ನು ಹುಡುಕುತ್ತಿದ್ದ ಈ ಮಂಜುನಾಥ, ಅಭ್ಯರ್ಥಿಗಳನ್ನು ಹುಡುಕಿ ಪರೀಕ್ಷಾ ಕೇಂದ್ರದವರ ಜೊತೆ ಡೀಲ್ ಮಾಡಿಸುತ್ತಿದ್ದ. ವಿರೇಶ್ ನಿಂದ ಹಣ ಪಡೆದಿರೋ ಅನೇಕ ಸಾಕ್ಷಿಗಳು ಸಿಐಡಿ ಪೊಲೀಸರಿಗೆ ತನಿಕೆ ವೇಳೆ ಸಿಕ್ಕಿವೆ. ನಾಪತ್ತೆಯಾಗಿರೋ ಮಂಜುನಾಥನಿಗಾಗಿ ಸಿಐಡಿ ಹುಡುಕಾಟ ನಡೆಸುತ್ತಿದೆ.