ಕೋಮು ಸಹಿತ ಎಲ್ಲ ಗಲಭೆ ಸಂದರ್ಭಗಳಲ್ಲಿ ಸಾರ್ವಜನಿಕ ಮತ್ತು ಸರಕಾರದ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ಅದರ ನಷ್ಟ ವಸೂಲಿಯನ್ನು ಗಲಭೆಕೋರರಿಂದಲೇ ಮಾಡುವ ಪ್ರಕ್ರಿಯೆ ಚುರುಕಾಗಬೇಕು ಎಂಬ ಆಗ್ರಹ ರಾಜ್ಯದಲ್ಲಿ ತೀವ್ರವಾಗತೊಡಗಿದೆ.
ಹುಬ್ಬಳ್ಳಿ ಗಲಭೆ ಬೆನ್ನಲ್ಲೇ ಈ ಬೇಡಿಕೆ ಹೆಚ್ಚಿದೆ. ಸಾರ್ವಜನಿಕ ಹಾಗೂ ಸರಕಾರದ ಆಸ್ತಿಗೆ ನಷ್ಟ ವುಂಟಾದರೆ ಗಲಭೆಕೋರರು ಮತ್ತು ಪ್ರತಿ ಭಟನಕಾರರಿಗೆ ದಂಡ ವಿಧಿಸಬೇಕು. ಇದಕ್ಕೆ ಪೂರಕವಾಗಿ ಚಾಲ್ತಿಯಲ್ಲಿರುವ ಕಾನೂನನ್ನು ಮತ್ತಷ್ಟು ಕಠಿನಗೊಳಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಈ ಕಾನೂನಿನಡಿ ರಚನೆಯಾದ ಕ್ಲೇಮ್ ಕಮಿಷನ್‌ಗಳು ರಾಜ್ಯದ ವಿವಿಧ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.
ಈ ನಡುವೆ, ವಿಶ್ವ ಹಿಂದೂ ಪರಿಷತ್ ಕೂಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಗಲಭೆ ಯಿಂದಾಗುವ ಆಸ್ತಿ ನಷ್ಟವನ್ನು ಗಲಭೆಕೋರ ರಿಂದಲೇ ವಸೂಲು ಮಾಡಲು ಉತ್ತರ ಪ್ರದೇಶ ಮಾದರಿಯಲ್ಲಿ ಕಠಿನ ಕಾನೂನನ್ನು ಜಾರಿಗೆ ತರಬೇಕು ಎಂದು ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಆಗ್ರಹಿಸಿದ್ದಾರೆ.