ಚಾಮರಾಜನಗರ: ಹಿಜಾಬ್, ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ, ಹಲಾಲ್ ವಿಚಾರಗಳನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ (ಎಸ್‌ಡಿಪಿಐ) ವತಿಯಿಂದ ನಗರದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಯಿತು.
ಡೀವಿಯೇಷನ್ ರಸ್ತೆಯಲ್ಲಿರುವ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
‘ಸಮಾಜದಲ್ಲಿ ಜಾತಿ, ಧರ್ಮ ನಡುವೆ ಧ್ವೇಷವನ್ನು ಬಿತ್ತಿ ಶತ ಶತಮಾನಗಳಿಂದ ಕರ್ನಾಟಕದಲ್ಲಿ ಜನರು ಪಾಲಿಸಿಕೊಂಡು ಬಂದ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡಲು ಸಂಘ ಪರಿವಾರದ ಸಂಘಟನೆಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪುಷ್ಟಿ ಕೊಡುವಂತಹ ದ್ವೇಷ ಭಾಷಣಗಳು, ಹೇಳಿಕೆಗಳನ್ನು ಅವುಗಳ ನಾಯಕರು ನೀಡುತ್ತಿದ್ದಾರೆ. ಉಡುಪಿಯಲ್ಲಿ ಹಿಜಾಬ್ ವಿವಾದವನ್ನು ಆರಂಭಿಸಿ, ಅಲ್ಲಿನ ಶಾಸಕ ರಘುಪತಿ ಭಟ್ ಮತ್ತು ಬಿಜೆಪಿ ಮುಖಂಡರು, ಸಂಘ ಪರಿವಾರದವರು ಈ ವಿಚಾರವನ್ನು ಉದ್ವಿಗ್ನಗೊಳಿಸಿ ಹಿಂದೂ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುವಂತೆ ಪ್ರೇರಣೆ ನೀಡಿ ಹಿಂದೂ ಮುಸ್ಲಿಂ ಕೋಮು ವಿಭಜನೆಯನ್ನು ಮಕ್ಕಳ ನಡುವೆ ಬಿತ್ತಿದರು’ ಎಂದು ಆರೋಪಿಸಿದರು.