ಬೆಂಗಳೂರು: ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಲಾಗಿದೆ. ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಪ್ರಧಾನಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಲಾಗಿದೆ. ರೆಹಾನ್ ಖಾನ್ ಎಂಬುವರ PILಅನ್ನು ಹೈಕೋರ್ಟ್ ವಜಾ ಮಾಡಿದೆ. ಭಾರತರತ್ನ ನೀಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಸರ್ಕಾರದೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧರಿಸುತ್ತಾರೆ. ಪ್ರಶಸ್ತಿ ನೀಡುವಂತೆ ಕೋರ್ಟ್ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಇತ್ತ, ಡಾ. ಶಿವಕುಮಾರ ಸ್ವಾಮೀಜಿ 115ನೇ ಜಯಂತೋತ್ಸವ ಕಾರ್ಯಕ್ರಮ ಸಿದ್ದಗಂಗಾ ಮಠದ ಆವರಣದಲ್ಲಿ ಇಂದು (ಏಪ್ರಿಲ್ 1) ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ ಆಗಲಿದ್ದಾರೆ. ಅಮಿತ್ ಶಾ ಬೆಳಗ್ಗೆ 10.30 ಕ್ಕೆ ತುಮಕೂರು ವಿವಿಯ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠದತ್ತ ಪ್ರಯಾಣ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು ಶಿವಕುಮಾರಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ ಆಗಲಿದ್ದಾರೆ. ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಭಗವಂತ್ ಖೂಬಾ, ಸಚಿವರು, ಸಂಸದರು ಸೇರಿದಂತೆ ಹಲವು ಗಣ್ಯರು ಭಾಗಿ ಆಗಲಿದ್ದಾರೆ. ವೇದಿಕೆ ಮೇಲೆ ಕೂರಲು 22 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.