ಬೆಂಗಳೂರು: ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಪುತ್ರಿ ವಂದಿತಾ ಪುನೀತ್ ರಾಜಕುಮಾರ್ ಅವರಿಗೆ ಸಾಂತ್ವನ ಹೇಳಿದರು.
ಅಪ್ಪು ಮನೆ ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ (Rahul Gandhi) “ಕನ್ನಡದ ಖ್ಯಾತ ನಟರಾಗಿದ್ದ ಶ್ರೀ ಪುನೀತ್ ರಾಜಕುಮಾರ್ (Puneeth Rajkumar) ಅವರ ನಿವಾಸದಲ್ಲಿ ಇಂದು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಕುಟುಂಬವನ್ನು ಭೇಟಿ ಮಾಡಿ ಪುನೀತ್ ಅವರ ಅಗಲಿಕೆಗೆ ನನ್ನ ಸಂತಾಪಗಳನ್ನು ಸೂಚಿಸಿದೆ.ಅತ್ಯಂತ ಕಡಿಮೆ ವಯಸ್ಸಿನಲ್ಲೇ ಪುನೀತ್ ಅವರು ಕೋಟ್ಯಂತರ ಕನ್ನಡಿಗರ ಮನೆ ಮನಗಳಿಗೆ ಎಂದೂ ಮರೆಯಲಾಗದಂತಹ ನೆನಪಿನ ಬುತ್ತಿಯನ್ನ ನೀಡಿದ್ದಾರೆ” ಎಂದು ರಾಹುಲ್ ಗಾಂಧಿ ಸ್ಮರಿಸಿದ್ದಾರೆ.