ನವದೆಹಲಿ: ರಾಜ್ಯಸಭೆಯ 72 ನಿವೃತ್ತ ಸದಸ್ಯರಿಗೆ ಇಂದು ಬೀಳ್ಕೊಡುಗೆ ನೀಡಲಾಗಿದ್ದು, ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು, ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್, ಪ್ರಧಾನಿ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡರು.
ಮೇಲ್ಮನೆಯ ಕೆಲ ಸದಸ್ಯರು ಈ ತಿಂಗಳು ನಿವೃತ್ತಿಯಾಗುತ್ತಿದ್ದು, ಇನ್ನು ಕೆಲವರು ಸ್ವಲ್ಪ ಸಮಯದ ನಂತರ ನಿವೃತ್ತರಾಗುತ್ತಿದ್ದಾರೆ. ಸಂಸತ್ತಿನ ಸಂಪ್ರದಾಯಕ್ಕೆ ಅನುಗುಣವಾಗಿ ಫೋಟೋ ಸೆಷನ್ ನಡೆಸಲಾಯಿತು. ರಾಜ್ಯಸಭೆಯು ನಿವೃತ್ತಿಯಾಗುವ ಸದಸ್ಯರಿಗೆ ಬೀಳ್ಕೊಡುಗೆ ನೀಡಲಿದ್ದು, ಹೀಗಾಗಿ ಇಂದು ಕಲಾಪದಲ್ಲಿ ಶೂನ್ಯ ಸಮಯ ಮತ್ತು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ.
ರಾಜ್ಯಸಭೆ ಇಂದು ಸಮಾವೇಶಗೊಂಡ ಕೂಡಲೇ ವಿವಿಧ ಪಕ್ಷಗಳ ಸದಸ್ಯರು ವಿದಾಯದ ಭಾಷಣ ಮಾಡುತ್ತಾರೆ. ರಾಜ್ಯಸಭಾ ಸಭಾಪತಿ ಹಾಗೂ ಉಪರಾಷ್ಟ್ರಪತಿಯೂ ಆಗಿರುವ ಎಂ. ವೆಂಕಯ್ಯ ನಾಯ್ಡು ಅವರು ತಮ್ಮ ಅಧಿಕೃತ ನಿವಾಸದಲ್ಲಿ 72 ನಿವೃತ್ತ ಸಂಸದರಿಗೆ ಔತಣಕೂಟ ಆಯೋಜಿಸಲಿದ್ದಾರೆ.
13 ರಾಜ್ಯಸಭಾ ಸ್ಥಾನಗಳಿಗೆ ಇಂದು ಆರು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಐವರು ರಾಜ್ಯಸಭಾ ನಾಮನಿರ್ದೇಶಿತರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಗಾಲ್ಯಾಂಡ್‌ನಿಂದ ಬಿಜೆಪಿ ನಾಮನಿರ್ದೇಶಿತ ಎಸ್ ಫಾಂಗ್ನಾನ್ ಕೊನ್ಯಾಕ್ ಕೂಡ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ನಾಗಾಲ್ಯಾಂಡ್‌ನಿಂದ ರಾಜ್ಯಸಭೆಯ ಮೊದಲ ಮಹಿಳಾ ಸದಸ್ಯೆಯಾಗಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಿಕಂದರ್ ಕುಮಾರ್ ಕೂಡ ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 43 ಶಾಸಕರನ್ನು ಹೊಂದಿದ್ದು, ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸಿರಲಿಲ್ಲ.