ಬೆಂಗಳೂರು: ಮೂರು ಪಿಡುಗುಗಳು ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡಿವೆ. ಒಂದು ಗಣಿಗಾರಿಕೆ, ಎರಡನೇಯದ್ದು ರಿಯಲ್ ಎಸ್ಟೇಟ್, ಮೂರನೇಯದ್ದು ಜಾತಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವ್ಯಾಖ್ಯಾನಿಸಿದರು. ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ವ್ಯವಸ್ಥೆ ಹಾಳಾಗಿರುವುದು ಗಣಿಗಾರಿಕೆಯಿಂದ. ಗಣಿ ಉದ್ಯಮಿಗಳು ಒಮ್ಮಿಂದೊಮ್ಮೆಲೆ ಎದ್ದು ಬಂದರು. ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಬಡ ವಿದ್ಯಾರ್ಥಿಗಳಿಗೆ ಪಾಸ್ ಹಂಚುವ ಕಾರ್ಯಕ್ರಮ ತರಲಾಯಿತು. ಇದರಿಂದಲೂ ರಾಜ್ಯದ ವ್ಯವಸ್ಥೆ ಹಾಳಾಯಿತು ಎಂದರು.1990ರಲ್ಲಿ ನಾನು ಒಂದು ಪೋಲಿಂಗ್ ಬೂತ್ಗೆ 50 ರೂ. ಕೊಟ್ಟಿದ್ದೆ. 8.50 ಲಕ್ಷ ರೂ.ದಲ್ಲಿ ಲೋಕಸಭೆಗೆ ಆರಿಸಿ ಬಂದಿದ್ದೆ. ಆದರೆ ಇಂದು ಗ್ರಾಮ ಪಂಚಾಯತಿ ಸದಸ್ಯ 8.50 ಲಕ್ಷ ರೂ.ಖರ್ಚು ಮಾಡಿದರೂ ಆಗುವುದಿಲ್ಲ.
ಆರತಿ ತಟ್ಟೆಗಳು ನಮಗೆ ಸ್ವಭಾವ ಕಲಿಸಿ ಬಿಟ್ಟಿತು. ಆ ಆರತಿ ತಟ್ಟೆಯಲ್ಲಿ ಒಂದೊಂದು ಸಾವಿರ ನೋಟುಗಳಿರುತ್ತವೆ. 150 ಮಂದಿ ಹೆಣ್ಣು ಮಕ್ಕಳು ಆರತಿ ತಟ್ಟೆ ಹಿಡಿದು ಸಾಲಾಗಿ ನಿಲ್ಲುತ್ತಾರೆ. ದುಡ್ಡಿನ ಎದುರು ನಾನು ಎಂಪಿ ಚುನಾವಣೆಯಲ್ಲಿ ಸೋತು ಬಿಟ್ಟೆ. ಆಡು ಮುಟ್ಟದ ಎಲೆ ಇಲ್ಲ, ಯತ್ನಾಳ್ ತಿರುಗಾಡದ ಹಳ್ಳಿ ಇಲ್ಲ ಎಂದು ಪ್ರಖ್ಯಾತಿಯಾಗಿದ್ದೆ. ಆದರೆ ನಾನು ಮುನ್ನೂರು ಮತಗಳಿಂದ ಸೋಲಬೇಕಾಯಿತು ಎಂದು ಸ್ಮರಿಸಿದರು.