5 ದಶಕಗಳ ಕಾಲದ ಗಡಿ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.ನವದೆಹಲಿ: ಅಸ್ಸಾಂ (Assam) ಮತ್ತು ಮೇಘಾಲಯ (Meghalaya) ರಾಜ್ಯಗಳ ನಡುವೆ 50 ವರ್ಷಗಳಿಂದ ಬಾಕಿ ಇದ್ದ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇಂದು ಮಧ್ಯಾಹ್ನ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವಅಮಿತ್ ಶಾ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವಾಲಯದ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. 5 ದಶಕಗಳ ಕಾಲದ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಅಸ್ಸಾಂ ಮತ್ತು ಮೇಘಾಲಯ ಎರಡೂ ಸರ್ಕಾರಗಳು ತಮ್ಮ ರಾಜ್ಯದ ಗಡಿಯುದ್ದಕ್ಕೂ 12 ಪ್ರದೇಶಗಳಲ್ಲಿ ಆರರಲ್ಲಿ ಗಡಿ ವಿವಾದಗಳನ್ನು ಪರಿಹರಿಸಲು ಕರಡು ನಿರ್ಣಯದೊಂದಿಗೆ ಬಂದಿವೆ. ಅಸ್ಸಾಂ ಮತ್ತು ಮೇಘಾಲಯ 885-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ.