ಹೈದರಾಬಾದ್: ತಂತ್ರಜ್ಞಾನವನ್ನು ಹೇಗೆಲ್ಲ ಉಪಯುಕ್ತವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಹೈದರಾಬಾದ್ನಲ್ಲಿ ನಡೆದ ಈ ಒಂದು ಘಟನೆ ತಅಜಾ ಉದಾಹರಣೆಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಲ್ಲಿಂದಲೇ ಹೈದರಾಬಾದ್ನ ತನ್ನ ನಿವಾಸದಲ್ಲಿ ನಡೆಯುತ್ತಿದ್ದ ಕಳ್ಳತವನ್ನು ತಪ್ಪಿಸಿದ್ದು, ಖದೀಮನನ್ನು ಹಿಡಿದುಕೊಟ್ಟಿದ್ದಾರೆ.
ಸೈಬರಾಬಾದ್ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಮಾನಿಟರ್ ಸೆನ್ಸಾರ್ ಸಾಧನ ಒಳಗೊಂಡ ಸಿಸಿಟಿವಿ ಕ್ಯಾಮೆರಾವನ್ನು ಮಾಲೀಕ ತನ್ನ ಮನೆಯಲ್ಲಿ ಅಳವಡಿಸಿದ್ದ. ಯಾರಾದರೂ ಮನೆಯ ಆಸುಪಾಸಿನಲ್ಲಿ ಬಂದರೆ ಮಾಲೀಕನ ಮೊಬೈಲ್ಗೆ ಎಚ್ಚರಿಕೆ ಕರೆ ಹೋಗುತ್ತಿತ್ತು. ಅದೇ ರೀತಿಯ ಮಾರ್ಚ್ 9ರಂದು ಬೆಳಗ್ಗೆ ಮೂರು ಗಂಟೆಗೆ ಎಚ್ಚರಿಕೆ ಕರೆ ಬಂದಾಗ ಮೊಬೈಲ್ ತೆಗೆದು ನೋಡಿದ ಮಾಲೀಕನಿಗೆ ಶಾಕ್ ಕಾದಿತ್ತು. ಖದೀಮನೊಬ್ಬ ಮನೆಯ ಸುತ್ತಮುತ್ತ ಓಡಾಡುವುದನ್ನು ನೋಡಿದ ಮಾಲೀಕ ತಕ್ಷಣ ನೆರೆಮನೆಯವರಿಗೆ ಮಾಹಿತಿ ನೀಡಿದ. ತಕ್ಷಣ ಮನೆಯತ್ತ ಓಡಿಬಂದ ನೆರೆಯವರು ಮನೆಯ ಬಾಗಿಲು ತೆರೆದಿರುವುದನ್ನು ನೋಡಿ ಹೊರಗಿನಿಂದ ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣ ಕೆಪಿಎಚ್‌ಬಿ ಪೊಲೀಸ್ ಠಾಣೆಯ ಡಿಟೆಕ್ಟಿವ್ ಇನ್‌ಸ್ಪೆಕ್ಟರ್ ಶ್ಯಾಮ್ ಬಾಬು ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಅಲ್ಲಿಗೆ ತಲುಪಿದರು. ಒಳಗಿನಿಂದ ಲಾಕ್ ಆಗಿದ್ದರಿಂದ ಬಾಗಿಲು ತಟ್ಟಿದರು ಮತ್ತು ಕಳ್ಳನನ್ನು ಶರಣಾಗುವಂತೆ ಕೇಳಿದರು. ಆರೋಪಿ ಬಾಗಿಲು ತೆರೆಯದ ಕಾರಣ ಇನ್ಸ್‌ಪೆಕ್ಟರ್ ಕಿಟಕಿ ಒಡೆದು ಮನೆಯೊಳಗೆ ಪ್ರವೇಶಿಸಿ, ಬೆಡ್ ರೂಮಿನಲ್ಲಿ ಅಡಗಿಕೊಂಡಿದ್ದ ಖದೀಮನನ್ನು ಬಂಧಿಸಿದ್ದಾರೆ. ಮನೆಯಲ್ಲಿದ್ದ ಕಪಾಟುಗಳು ತೆರೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಖದೀಮ ಸೋಫಾದ ಕೆಳಗೆ ಬಚ್ಚಿಟ್ಟಿದ್ದ ಚಿನ್ನಾಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳನನ್ನು ಟಿ ರಾಮಕೃಷ್ಣ (32) ಎಂದು ಗುರುತಿಸಲಾಗಿದ್ದು, ಸಿನಿಮಾ ಚಿತ್ರೀಕರಣದ ವೇಳೆ ಈತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ನಾಗರಕರ್ನೂಲ್ ಜಿಲ್ಲೆಯವನಾದ ಈತ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಈಗಾಗಲೇ ಕಳ್ಳತನ ಪ್ರಕರಣದಲ್ಲಿ 10 ಬಾರಿ ಜೈಲು ಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇಂತಹ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದ. ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.