ಬೆಂಗಳೂರು, ಮಾ.10- ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಪಕ್ಷ ತೊರೆಯಲು ಮುಂದಾಗಿದ್ದ ಕೆಲವು ಶಾಸಕರು ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ.
ಒಂದು ವೇಳೆ ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದರೆ, ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿಯ ಸುಮಾರು 20ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಕಡೆ ಮುಖ ಮಾಡುವ ಲೆಕ್ಕಾಚಾರದಲ್ಲಿದ್ದರು.
ಆದರೆ, ಇದೀಗ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುತ್ತಿರುವುದರಿಂದ ಪಕ್ಷ ತೊರೆಯಲು ಒಂದು ಹೆಜ್ಜೆ ಮುಂದೆ ಇಟ್ಟಿದ್ದ ಶಾಸಕರು ಬಿಜೆಪಿಯಲ್ಲೇ ತಮ್ಮ ಮುಂದಿನ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ಒಂದು ಮೂಲದ ಪ್ರಕಾರ, ಮಧ್ಯಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸುಮಾರು 18 ರಿಂದ 20 ಶಾಸಕರು ಚುನಾವಣೆ ವೇಳೆಗೆ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಸೇರುವ ಮಾತುಗಳು ವ್ಯಕ್ತವಾಗಿದ್ದವು. ಆಪರೇಷನ್ ಕಮಲಕ್ಕೆ ಒಳಗಾಗಿ ಬಂದಿದ್ದ ಕೆಲವರು ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ಹಲವು ಶಾಸಕರು ಈಗಾಗಲೇ ಕಾಂಗ್ರೆಸ್‍ನ ಪ್ರಮುಖ ನಾಯಕರ ಜತೆ ಮಾತುಕತೆ ನಡೆಸಿದ್ದರು.
ಜ ಬೊಮ್ಮಾಯಿ ನಾಯಕತ್ವ, ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆಗೆ ಹೋದರೆ ಮತ್ತೊಮ್ಮೆ ಗೆಲ್ಲಬಹುದೆಂಬುದು ಬಹುತೇಕ ಶಾಸಕರ ಲೆಕ್ಕಾಚಾರವಾಗಿದೆ.
ಸರ್ಕಾರದ ಮೇಲೆ ಕೇಳಿಬಂದಿರುವ ಭ್ರಷ್ಟಾಚಾರ ಪ್ರಕರಣಗಳು, ಬಿಟ್ ಕಾಯಿನ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆ ಹೀಗೆ ಹತ್ತು-ಹಲವು ಆರೋಪಗಳು ಕೇಳಿಬಂದಿದ್ದರಿಂದ ಬಿಜೆಪಿ ಸಹವಾಸವೇ ಸಾಕು ಎಂದು ಅನೇಕ ಶಾಸಕರು ಭಾವಿಸಿದ್ದರು. ಈಗ ಎಲ್ಲ ನಿರೀಕ್ಷೆಗಳನ್ನೂ ಬುಡಮೇಲು ಮಾಡಿ ಬಿಜೆಪಿ ಅಕಾರ ಹಿಡಿದಿರುವುದರಿಂದ ಹಳೆ ಗಂಡನ ಪಾದವೇ ಗತಿ ಎಂದು ಬಿಜೆಪಿಯಲ್ಲೇ ಮುಂದುವರೆಯುವ ತೀರ್ಮಾನಕ್ಕೆ ಬಂದಿದ್ದಾರೆ.