ಬೆಂಗಳೂರು: ಪದವೀಧರರಾಗಲು ಹಗಲು-ರಾತ್ರಿ ಕಷ್ಟಪಟ್ಟು ಓದಬೇಕು. ಕೆಲವೊಮ್ಮೆ ಇನ್ನಿಲ್ಲದಂತೆ ಅಭ್ಯಾಸ ಮಾಡಿದರೂ ಕೆಲವರು ಪಾಸ್ ಆಗಲ್ಲ. ಆದರೆ, ಬರೀ 40 ಸಾವಿರ ರೂ. ಕೊಟ್ಟರೆ ಸಾಕು, ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳೇ ನಿಮಗೆ ಸಿಗುತ್ತೆ!
ಅದೂ ಹಣ ಕೊಟ್ಟ 20 ದಿನದಲ್ಲೇ! ಹೌದು, ಅಚ್ಚರಿ ಎನಿಸಿದರೂ ಇದು ನಿಜ. ದೇಶದ ವಿವಿಧ ವಿವಿಗಳ ಪದವಿಯ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಬೆಳಕಿಗೆ ಬಂದಿದೆ. ಬೆಂಗಳೂರಿನ ಜಯನಗರ ಪೊಲೀಸರು ನಾಲ್ವರನ್ನು ಬಂಧಿಸಿ, ಬರೋಬ್ಬರಿ 200ಕ್ಕೂ ಅಧಿಕ ನಕಲಿ ಅಂಕಪಟ್ಟಿ, 4.60 ಲಕ್ಷ ನಗದು ಹಾಗೂ ಹಲವು ವಿವಿಗಳ ನಕಲಿ ಸೀಲು ಮತ್ತು ಹಾಲೋಗ್ರಾಮ್ ಜಪ್ತಿ ಮಾಡಿದ್ದಾರೆ.
ಜಯನಗರದ ನಿವಾಸಿ ರಘು (34), ಧರ್ಮ ಕುಮಾರ್ (39), ದೀಪಕ್ (32), ನರೇಶ್ ರೆಡ್ಡಿ (37) ಬಂಧಿತರು. ಆರೋಪಿಗಳ ಪೈಕಿ ನರೇಶ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರೆ, ದಿಲೀಪ್ ಎಂಬಿಎ ಪದವೀಧರನಾಗಿದ್ದ. ಧರ್ಮ ಕುಮಾರ್ ಕರ್ನಾಟಕ ಮುಕ್ತ ವಿವಿ ಹಾಗೂ ಹಲವಾರು ವಿವಿಯಲ್ಲಿ ಡೊನೇಷನ್ ಆಧಾರದಲ್ಲಿ ಸೀಟು ಕೊಡಿಸುವ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳು 2019ರಲ್ಲಿ ನಕಲಿ ಮಾರ್ಕ್ಸ್ಕಾರ್ಡ್ ಮಾರಾಟ ದಂಧೆ ಆರಂಭಿಸಿದ್ದರು.
ಫೇಲಾದವರೇ ಟಾರ್ಗೆಟ್!: ವಿವಿಧ ಕಾಲೇಜುಗಳ ಬಳಿ ಹೋಗಿ ಅಲ್ಲಿನ ಅಟೆಂಡರ್ಗಳಿಗೆ ಹಣ ಕೊಟ್ಟು ಅನುತ್ತೀರ್ಣ ಹೊಂದಿದ್ದ ವಿದ್ಯಾರ್ಥಿಗಳ ಪಟ್ಟಿ ಹಾಗೂ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ನಂತರ ವಿದ್ಯಾರ್ಥಿಗಳನ್ನು ಸಂರ್ಪಸಿ, ‘ಕಷ್ಟಪಟ್ಟು ಏಕೆ ಓದುತ್ತೀರಾ. ಅರಾಮಾಗಿ ಕೆಲಸಕ್ಕೆ ಸೇರಿ ದುಡಿಯಿರಿ. ಉತ್ತೀರ್ಣ ಹೊಂದಿರುವ ನೈಜ ಅಂಕಪಟ್ಟಿ ಹಾಗೂ ಪ್ರಮಾಣಪತ್ರ ಕೊಡುತ್ತೇವೆ’ ಎಂದು ನಂಬಿಸುತ್ತಿದ್ದರು. ಒಂದು ಅಂಕಪಟ್ಟಿಗೆ ತಲಾ 25 ರಿಂದ 40 ಸಾವಿರ ರೂ. ಪಡೆಯುತ್ತಿದ್ದರು. ಯಾವುದೇ ಪರೀಕ್ಷೆ ಬರೆಯದಿದ್ದರೂ ಎಲ್ಲ ವಿಷಯಗಳಲ್ಲೂ ಉತ್ತೀರ್ಣರಾದಂತೆ ವಿದ್ಯಾರ್ಥಿಯ ಹೆಸರಿನಲ್ಲಿ ಆತ ಹೇಳಿದ ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಹಣ ಕೊಟ್ಟ 20 ದಿನದಲ್ಲೇ ಅಂಕಪಟ್ಟಿ ಸಿದ್ಧವಾಗುತ್ತಿತ್ತು. ಹೊರ ರಾಜ್ಯಗಳಲ್ಲಿ ಮುಚ್ಚಿರುವ ವಿವಿಗಳ ಹೆಸರಿನ ನಕಲಿ ಮಾರ್ಕ್ಸ್ಕಾರ್ಡ್ ಅನ್ನೂ ಮಾರಾಟ ಮಾಡುತ್ತಿದ್ದರು.