ಬೆಂಗಳೂರು: ಕೋವಿಡ್ ಅಬ್ಬರ, ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಹೀಗೆ ನಾನಾ ಅಡ್ಡಿ-ಆತಂಕಗಳಲ್ಲೇ 2021ನೇ ವರ್ಷ ಮುಗಿದುಹೋಗಿದ್ದರಿಂದ 2021-22ನೇ ಸಾಲಿನ ಆಯವ್ಯಯವೂ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳಲಿಲ್ಲ. 2021-22ನೇ ಸಾಲಿನ ಆಯವ್ಯಯವನ್ನು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 2021ರ ಮಾರ್ಚ್ 8ರಂದು ಮಂಡಿಸಿದ್ದರು.
ಸಾಂಕ್ರಾಮಿಕದ ನಡುವೆಯೂ ವಿತ್ತೀಯ ಶಿಸ್ತು ಪಾಲನೆ ಮತ್ತು ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವುದು ಕತ್ತಿಯ ಅಲಗಿನ ಮೇಲಿನ ನಡಿಗೆಯ ಅನುಭವ ನೀಡಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದ ಬಿಎಸ್ವೈ, ‘ಅಳ್ಳೆದೆ ಅವನತಿಯ ದಾರಿ ಆತ್ಮವಿಶ್ವಾಸ ಯಶಸ್ಸಿನ ಪರಿ’ ಎಂಬ ಅನುಭವ ವಾಣಿಯನ್ನು ಬಜೆಟ್ ವೇಳೆ ಪ್ರಸ್ತಾಪಿಸಿದ್ದರು.
ಆದರೆ ಬಜೆಟ್ ಮಂಡನೆಯ ದಿನದಿಂದಲೇ ರಾಜ್ಯದಲ್ಲಿ ಕರೊನಾ ಪ್ರಕರಣ ಏರುತ್ತಲೇ ಹೋಗಿತ್ತು. ಬಜೆಟ್ ಮಂಡಿಸಿ ನಾಲ್ಕು ತಿಂಗಳು ಕೋವಿಡ್ ಅಬ್ಬರ ಇದ್ದು, ಅದರ ನಿರ್ವಹಣೆಯೇ ಪ್ರಧಾನ ಆದ್ಯತೆಯಾಗಿತ್ತು. ಅಂದರೆ ಕರೊನಾ ವಿರುದ್ಧದ ಹೋರಾಟದಲ್ಲೇ ಆಡಳಿತಯಂತ್ರ ತೊಡಗಿ, ಸುಸ್ತೆದ್ದು ಹೋಗಿತ್ತು. ಹಾಗೂ ಹೀಗು ಮೂರು ವಾರ ಕಳೆಯುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆ, ಹೊಸ ಸಿಎಂ ಪದಗ್ರಹಣ, ಸಂಪುಟ ರಚನೆಯಂತಹ ಪ್ರಕ್ರಿಯೆಯಲ್ಲೇ ಕಳೆದುಹೋಯಿತು. ಹೀಗೆ ಪ್ರಮುಖ ತೀರ್ಮಾನ ಕೈಗೊಳ್ಳಬೇಕಾದ ಸಂದರ್ಭ ಆಡಳಿತ ಯಂತ್ರದ ದೃಷ್ಟಿ ಅನ್ಯಕಾರಣದತ್ತ ನೆಟ್ಟಿತ್ತು.
ಮಹಿಳೆಯರು, ಕೃಷಿ ಮತ್ತು ಪೂರಕ, ಸವೋದಯ ಮತ್ತು ಕ್ಷೇಮಾಭಿವೃದ್ಧಿ, ಬೆಂಗಳೂರು ನಗರ ಅಭಿವೃದ್ಧಿ, ಸಂಸ್ಕೃತಿ, ಆಡಳಿತ ಸುಧಾರಣೆ ಮತ್ತು ಸೇವೆ ಎಂದು ಆರು ವಿಭಾಗ ಮಾಡಿ ಬಜೆಟ್ ಮಂಡಿಸಲಾಗಿತ್ತು, ಇಲಾಖಾ ವಾರು ಪ್ರತ್ಯೇಕವಾಗಿ ಪ್ರಸ್ತಾಪಿಸಿರಲಿಲ್ಲ. ಬಜೆಟ್ನಲ್ಲಿ ಪ್ರಕಟಿಸಿದ ಯೋಜನೆಗಳಲ್ಲಿ ಕೆಲವು ತಕ್ಷಣಕ್ಕೆ ಆಗುವಂತವು ಮತ್ತೆ ಕೆಲವು ದೀರ್ಘಾವಧಿಯಲ್ಲಿ ಅನುಷ್ಠಾನ ಆಗುವಂತಹವು. ಇನ್ನು ಕೆಲವು ನಿರ್ಣಯಗಳು. ಈ ಪೈಕಿ ಹತ್ತಾರು ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಸರ್ಕಾ ರಕ್ಕೆ ಮಾಡಲು ಸಾಧ್ಯವಾಗಿಲ್ಲ. ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ದೊಡ್ಡ ಮಟ್ಟದ ಹಿನ್ನೆಡೆಯಾಗಿದೆ. ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣ, ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಈಗ ಕೋವಿಡ್ ನೆಪ ಹೇಳಿ ಪ್ರಕ್ರಿಯೆ ನಡೆಸಿಲ್ಲ.