ಹೊಸದಿಲ್ಲಿ: ಕರ್ನಾಟಕದ ಬೆಳಗಾವಿಯಲ್ಲಿ ಫೆ.27ರಿಂದ ಮಾ. 10ರ ವರೆಗೆ ಭಾರತ ಮತ್ತು ಜಪಾನ್ ವಾರ್ಷಿಕ ಜಂಟಿ ಸೇನಾಭ್ಯಾಸ ನಡೆಸಲಿವೆ.
ವಿವಿಧ ದೇಶಗಳೊಂದಿಗೆ ಭಾರತ ಸೇನಾ ತರಬೇತಿ ಅಭ್ಯಾಸವನ್ನು ನಡೆಸುತ್ತಾ ಬಂದಿದ್ದು ಅದರಂತೆ ಈ ಬಾರಿ ಜಪಾನ್ ಜತೆಗೂಡಿ ಸೇನಾಭ್ಯಾಸ ನಡೆಸಲಿದೆ.
ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಉಭಯ ದೇಶಗಳು ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಜಂಟಿ ಸೇನಾಭ್ಯಾಸ ಮಹತ್ವದ್ದು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಶುಕ್ರವಾರ ಜಪಾನ್ ಸೇನೆ ಬೆಳಗಾವಿಗೆ ಆಗಮಿಸಿದ್ದು ರವಿವಾರ ಆರಂಭಗೊಳ್ಳಲಿರುವ “ಧರ್ಮ ಗಾರ್ಡಿಯನ್’ ಸೇನಾಭ್ಯಾಸದಲ್ಲಿ ಪಾಲ್ಗೊಳ್ಳಲಿದೆ. ಈ ವೇಳೆ ಎರಡೂ ದೇಶಗಳ ಯೋಧರು ಅರಣ್ಯ, ಅರೆ ನಗರ ಮತ್ತು ನಗರ ಪ್ರದೇಶದಲ್ಲಿ ಕೈಗೊಳ್ಳಲಾಗುವ ಸೇನಾ ಕಾರ್ಯಾಚರಣೆಯ ಅಭ್ಯಾಸ ನಡೆಸಲಿದ್ದಾರೆ. ಅರೆ ನಗರ ಪ್ರದೇಶಗಳಲ್ಲಿನ ಭಯೋತ್ಪಾದಕರ ಅಡಗುದಾಣ ಗಳ ಮೇಲೆ ದಾಳಿ, ಮನೆಗಳ ಶೋಧ ಕಾರ್ಯಾಚರಣೆ, ಪ್ರಥಮ ಚಿಕಿತ್ಸೆ, ಶಸ್ತ್ರರಹಿತ ಹೋರಾಟಗಳನ್ನು ಜಂಟಿಯಾಗಿ ಅಭ್ಯಸಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.