ಬೆಂಗಳೂರು: ಮುಂದಿನ ಬಜೆಟ್‌ನಲ್ಲಿ ರಾಜ್ಯದ ಪ್ರಗತಿಗೆ ಪೂರಕವಾದ ಹಾಗೂ ಎಲ್ಲ ವರ್ಗದವರಿಗೆ ಆರ್ಥಿಕ ನ್ಯಾಯ ಒದಗಿಸುವ, ರಾಜ್ಯದ ಅಭಿವೃದ್ದಿ ಬಿಂಬಿಸುವ ಮುನ್ನೋಟದ ಬಜೆಟ್ನನ್ನು ಮಂಡಿಸಲಿದ್ದೇವೆ ಎಂದು ಸಿಎಂ ವಿಧಾನಸಭೆಯಲ್ಲಿ ಘೋಷಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ವೇಳೆ ನಡೆಯುತ್ತಿದ್ದ ಕಾಂಗ್ರೆಸ್‌ನ ಧರಣಿ, ಗದ್ದಲದ ನಡುವೆಯೇ ಸಿಎಂ ಮಾತನಾಡಿ, ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಕೋವಿಡ್‌ನ ಯಶಸ್ವಿ ನಿರ್ವಹಣೆ ನಡುವೆಯೇ ಅಭಿವೃದ್ಧಿ ಕಾರ್ಯಗಳಲ್ಲೂ ಮುಂದೆ ಸಾಗಿದೆ. ಹತ್ತು ಹಲವು ಯೋಜನೆಗಳ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದ್ದೇವೆ ಎಂದರು.
ರಾಜ್ಯಪಾಲರ ಭಾಷಣ ಹಿನ್ನೋಟ, ಮುನ್ನೋಟ ಇಲ್ಲ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಹಿನ್ನೋಟ, ಸಾಧನೆಯನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದೇವೆ. ಮುನ್ನೋಟವನ್ನು ಬಜೆಟ್‌ನಲ್ಲಿ ಹೇಳುತ್ತೇನೆ. ಎಲ್ಲ ವರ್ಗದವರ ಆರ್ಥಿಕ ಸ್ಥಿತಿಗೆ ಬಲ ತುಂಬಿ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ಮಂಡಿಸಿ, ಭವಿಷ್ಯದ ಕರ್ನಾಟಕ ಹೇಗಿರುತ್ತದೆ ಎಂಬುದನ್ನು ಬಜೆಟ್‌ನಲ್ಲಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.