ಬೆಂಗಳೂರು: ಬಜರಂಗದಳ ಕಾರ್ಯಕರ್ತ 26 ವರ್ಷದ ಯುವಕ ಹರ್ಷ ಕೊಲೆಯಾದ ನಂತರ ನಿನ್ನೆ ಸೋಮವಾರ ಶಿವಮೊಗ್ಗ ನಗರದಲ್ಲಿ ಶವವನ್ನು ಹೊತ್ತು ಕಾರ್ಯಕರ್ತರು ಮೆರವಣಿಗೆ ಸಾಗಿರುವ ಬಗ್ಗೆ ಈಗ ಹಲವು ಪ್ರಶ್ನೆಗಳು ಎದ್ದಿವೆ.
ಕೋಮುಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಘಟನೆಯಾದ ಬಳಿಕ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಹಲವು ಮನೆಗಳಿಗೆ ಮತ್ತು ವಾಹನಗಳಿಗೆ ಉದ್ರಿಕ್ತರ ಗುಂಪು ಕಲ್ಲು ಎಸೆದ ಬಳಿಕ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು.
ಹೀಗಿರುವಾಗ ಮೆರವಣಿಗೆ ಸಾಗಲು ಶಿವಮೊಗ್ಗ ಪೊಲೀಸರು ಅನುಮತಿ ಹೇಗೆ ನೀಡಿದರು ಎಂದು ನಿವೃತ್ತ ಡಿಸಿಪಿ ಬಿ ಎಂ ಪೂಣಚ ಕೇಳುತ್ತಾರೆ.
ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಪಿ ಕೋದಂಡರಾಮಯ್ಯ, ಸಚಿವರು ಸೇರಿದಂತೆ ರಾಜಕಾರಣಿಗಳು ಇಂತಹ ಮೆರವಣಿಗೆಯಲ್ಲಿ ಭಾಗವಹಿಸಲು ಹೇಗೆ ಸಾಧ್ಯ, ಸಾರ್ವಜನಿಕ ಆಸ್ತಿಪಾಸ್ತಿ ಬಹಳಷ್ಟು ನಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅನುಮತಿ ಕೊಡುವುದು ನಿಜಕ್ಕೂ ದೊಡ್ಡ ತಪ್ಪು ಎಂದು ಹೇಳುತ್ತಾರೆ.
ಮಾಜಿ ಡಿಜಿ ಮತ್ತು ಐಜಿಪಿ ಶಂಕರ ಬಿದರಿ, ‘ಇತ್ತೀಚಿನ ತಿಂಗಳುಗಳಲ್ಲಿ, ಕೆಲವು ಬೆಳವಣಿಗೆಗಳು ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುವ ಬೆದರಿಕೆ ಹಾಕುತ್ತಿವೆ. ಯಾವುದೇ ಹಸ್ತಕ್ಷೇಪದ ಹೊರತಾಗಿಯೂ, ಶಾಂತಿ ಭಂಗ, ಜನರಿಗೆ ಗಾಯ ಮತ್ತು ಸಾರ್ವಜನಿಕ ಆಸ್ತಿ ನಷ್ಟವನ್ನು ತಡೆಯಲು ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಪಾರದರ್ಶಕವಾಗಿ ಕೆಲಸ ಮಾಡಬೇಕೆಂದು ನಾನು ಅಧಿಕಾರಿಗಳನ್ನು ಕೇಳುತ್ತೇನೆ ಎನ್ನುತ್ತಾರೆ.