ಕೆಫೆ ಹಾಗೂ ರೆಸ್ಟಾರೆಂಟ್ಗಳನ್ನು ಬಂದ್ ಮಾಡುವಂತೆ ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ತಡರಾತ್ರಿಯಲ್ಲಿ ರೆಸ್ಟಾರೆಂಟ್ಗಳನ್ನು ನಡೆಸುವುದಕ್ಕೆ ಕಿಲ್ವಾಕ್ ಠಾಣೆ ಪೊಲೀಸರು ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಎನ್ ಗುಣರಾಜ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಈ ಮಹತ್ವದ ಆದೇಶವನ್ನು ನೀಡಿದ್ದಾರೆ.
ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯಲ್ಲಿ ತಮ್ಮ ಹೋಟೆಲ್ ಅಥವಾ ರೆಸ್ಟಾರೆಂಟ್ಗಳಲ್ಲಿ ವ್ಯಾಪಾರ ನಡೆಸುವ ಹಕ್ಕನ್ನು ಮಾಲೀಕರು ಹೊಂದಿದ್ದಾರೆ. ಅಲ್ಲದೇ 21ನೇ ವಿಧಿಯ ಅಡಿಯಲ್ಲಿ ಗ್ರಾಹಕರಿಗೂ ಆಹಾರ ಸೇವಿಸುವ ಹಕ್ಕು ಇದೆ. ಇಂತಹ ಸಂದರ್ಭದಲ್ಲಿ ಹೋಟೆಲ್ಗಳನ್ನು ರಾತ್ರಿ ಸಮಯದಲ್ಲಿ ನಡೆಸದಂತೆ ತಡೆ ನೀಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಹೇಳಿದ್ದಾರೆ.
ಸಂವಿಧಾನದ ಪರಿಚ್ಛೇದಗಳನ್ನು ಮೀರಿ ನಿಯಮಗಳನ್ನು ಜಾರಿಗೆ ತರವ ವೇಳೆಯಲ್ಲಿ ಸಮಂಜಸವಾದ ಹಾಗೂ ಪ್ರಾಮಾಣಿಕವಾದ ಕಾರಣವನ್ನು ಹೊಂದಿರಬೇಕು. ರೆಸ್ಟಾರೆಂಟ್ ಅಥವಾ ಕೆಫೆಗಳನ್ನು ನಡೆಸಲು ಕಾನೂನಿನ ಅಡಿಯಲ್ಲಿ ಯಾವುದೇ ಅಡ್ಡಿಯಿಲ್ಲ. ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಬೇಕು ಎಂಬ ಕಾರಣಕ್ಕೆ ಪೊಲೀಸರು ರೆಸ್ಟಾರೆಂಟ್ಗಳನ್ನು ಬಂದ್ ಮಾಡುವಂತೆ ಒತ್ತಾಯ ಹೇರುವಂತಿಲ್ಲ. ಈ ಮೂಲಕ ಪೊಲೀಸರು ತಿನ್ನಲೆಂದು ಹೋಟೆಲ್ಗೆ ಬರುವ ಗ್ರಾಹಕರ ಹಕ್ಕನ್ನೂ ಕಸಿದುಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.
Laxmi News 24×7