ಗದಗ: ಕಾಂಗ್ರೆಸ್‍ನವರೇ ಬಿಜೆಪಿಗೆ ಬರುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಸೇರುತ್ತಾರೆ ಎಂಬ ಕೈ ನಾಯಕರ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.
ನಗರದ ಪರಿಸರ ಲೇಔಟ್‍ನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಚೇರಿ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿ, ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವ್ಯಾಕೆ ಅಲ್ಲಿಗೆ ಹೋಗೋಣ. ಬಿಜೆಪಿ ಮನೆಗೆ ಸೊಸೆಯಾಗಿ ಬಂದು ಬಾಗಿಲಿಗೆ ಮೊಳೆ ಹೊಡೆದು ಮನೆಯ ಮಗಳಾಗಿದ್ದೇವೆ. ಹೀಗಾಗಿ ಮತ್ತೆ ಸಹಕರಿಸುವ ಪ್ರಶ್ನೆ ಇಲ್ಲ ಎಂದರು.
ಕಾಂಗ್ರೆಸ್‍ನವರಿಗೆ ಬಿಜೆಪಿ ಮೇಲೆ ಅಷ್ಟ್ಯಾಕೆ ಮಮಕಾರ ಇದೆಯೋ ಗೊತ್ತಿಲ್ಲ. ಕಾಂಗ್ರೆಸ್‍ನ ತಳಪಾಯ ಕುಸಿತವಾಗಿರುವುದರಿಂದ ಬೇರೆ ಪಕ್ಷದವರನ್ನು ಕರೆತಂದು ಟಿಕೆಟ್ ನೀಡಲು ಹಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಸಚಿವ ಸಂಪುಟದ ಕುರಿತು ಮಾತನಾಡಿದ ಅವರು, 5 ಬೆರಳು ಒಂದೇ ಸಮನಾಗಿ ಇರುವುದಿಲ್ಲ. ಇನ್ನೂ ಐದು ಸಚಿವ ಸ್ಥಾನಗಳು ಖಾಲಿ ಇರುವುದರಿಂದ ಸಚಿವರಾಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಕೆಲವರು ಸಚಿವರಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.