ಬೆಂಗಳೂರು: ಹಿಜಾಬ್ ವಿವಾದ ಭುಗಿಲೆದಿರುವ ಬಳಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕಾಂಗ್ರೆಸ್ ಅಲ್ಪಸಂಖ್ಯಾತ ಶಾಸಕರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿ ಊಟವನ್ನೂ ಮಾಡಿದ್ದಾರೆ.
ಸಚಿವ ಬಿ ಸಿ ನಾಗೇಶ್ ಅವರ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರಾದ ಜಮೀರ್ ಅಹ್ಮದ್, ಎನ್ ಎ ಹ್ಯಾರೀಸ್, ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಸಿಎಂ ಇಬ್ರಾಹಿಂ, ರಹೀಂಖಾನ್ ಅವರು ಹಿಜಾಬ್ ಸಂಬಂಧ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್, ಕೆಲವು ಕಡೆ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ, 9,10 ನೇ ತರಗತಿ ಆರಂಭವಾಗಿದೆ, ಕೋರ್ಟ್ ಆರ್ಡರ್ ಎಲ್ಲಾ ಫಾಲೋ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ನೌಕರರಿಗೆ ಯಾವುದೇ ನಿರ್ಬಂಧ ಇಲ್ಲ, ಶಿಕ್ಷಕಿಯರು ಹಿಜಾಬ್ ಧರಿಸಬಾರದು ಎಂದು ಹೇಳಿದ್ದೇನೆ. ಹಿಜಾಬ್ ಧರಿಸಿ ಸರಿಯಾಗಿ ಪಾಠ ಮಾಡಲು ಆಗುವುದಿಲ್ಲ ಎಂದರು.
1.20 ಲಕ್ಷ ಅಲ್ಪ ಸಂಖ್ಯಾತರ ಮಕ್ಕಳಲ್ಲಿ 80 ಸಾವಿರ ಹೆಣ್ಣು ಮಕ್ಕಳು ಇದ್ದಾರೆ. ಇಂದು ಹಿಜಾಬ್ ತೆಗೆಯಲ್ಲ ಎಂದು 38 ಮಕ್ಕಳು ಶಾಲೆ ಬಿಟ್ಟು ಹೋಗಿದ್ದಾರೆ. ಶಾಲೆಗೆ ಬಾರದ ಮಕ್ಕಳ ಕಡೆ ಒತ್ತು ಕೊಡುತ್ತಿದ್ದೇವೆ. ಕೋರ್ಟ್ ಆರ್ಡರ್ ಪಾಲನೆ ಮಾಡಬೇಕು ಎಂದು ಹೇಳಿದರು.
ಎಳೆ ವಯಸ್ಸಿನವರಿಗೆ ಪ್ರವೋಕೇಶನ್ ನಡೆಯುತ್ತದೆ. ಪದವಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಇಲ್ಲ. ಡ್ರೆಸ್ ಕೋಡ್ ಇರೋ ಕಡೆ ಪಾಲನೆ ಮಾಡಬೇಕು. ನಿನ್ನೆ 11ಕಾಲೇಜುಗಳಲ್ಲಿ ತೀವ್ರ ವಿರೋಧ ಆಗಿತ್ತು. ಇವತ್ತು ನಾಲ್ಕು ಶಾಲೆಗಳಲ್ಲಿ ಮಾತ್ರ ಕಂಡು ಬಂದಿದೆ. ಕೆಲವೇ ಮಕ್ಕಳು ಭಾವನಾತ್ಮಕವಾಗಿ ಶಾಲೆಗಳನ್ನು ಬಿಟ್ಟಿದ್ದಾರೆ. ಸ್ವಲ್ಪ ದಿನದಲ್ಲೇ ಇದು ಸರಿಹೋಗುತ್ತದೆ ಎಂದು ಹೇಳಿದರು.