ಬೆಳಗಾವಿ: ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಬ್‍ಗೆ ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಪಟ್ಟುಹಿಡಿದು ಪ್ರತಿಭಟನೆಗೆ ಮುಂದಾದಾಗ ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯ ಸದಾಶಿವ ನಗರದ ವಿಜಯ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿದ್ದು ಆ ಪೈಕಿ 50ರಷ್ಟು ವಿದ್ಯಾರ್ಥಿನಿಯರು ಮುಸ್ಲಿಂ ಸಮಾಜದವರಿದ್ದಾರೆ. ಅದರಲ್ಲಿ ಇಂದು 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಬ್‍ಗೆ ಅವಕಾಶ ನೀಡುವಂತೆ ಪಟ್ಟುಹಿಡಿದ್ದಾರೆ. ಆದ್ರೆ, ಕಾಲೇಜು ಆಡಳಿತ ಮಂಡಳಿ ಕೋರ್ಟ್ ಆದೇಶವನ್ನು ಪಾಲನೆ ಮಾಡುವಂತೆ ಖಡಕ್ ಸೂಚನೆ ಕೊಟ್ಟಿದೆ. ಹಾಗಾಗಿ ವಿದ್ಯಾರ್ಥಿನಿಯರು ಕ್ಲಾಸ್‍ಗೆ ಬಹಿಷ್ಕಾರ ಹಾಕಿ ಹೊರ ಹೋಗುತ್ತಿದ್ದರು. ಕಾಲೇಜು ಸಿಬ್ಬಂದಿ ಮತ್ತು ಪೊಲೀಸರು ವಿದ್ಯಾರ್ಥಿಗಳನ್ನು ತಡೆದು ಒಳಗಡೆ ಕೌನ್ಸಿಂಗ್ ಮಾಡಲು ಮುಂದಾಗಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಹಿಜಬ್ ತೆಗೆಯುವುದಿಲ್ಲ ಕಾಲೇಜು ಒಳಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದ್ದಾರೆ. ಈ ವಿಷಯ ವಿದ್ಯಾರ್ಥಿನಿಯರ ಪೋಷಕರಿಗೆ ತಿಳಿಯುತ್ತಿದ್ದಂತೆ ಕಾಲೇಜಿನತ್ತ ಯುವಕರ ಗುಂಪು ಆಗಮಿಸಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಲ್ಲದೇ ಪ್ರಾಂಶುಪಾಲರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.