ಬೆಂಗಳೂರು: ಮಾಜಿ ಶಾಸಕ ಅಶೋಕ್ ಪಟ್ಟಣ್ ಅವರಿಗೆ ನೋಟಿಸ್ ನೀಡಿದ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಸದ್ದು ಮಾಡುತ್ತಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಪ್ರದರ್ಶಿಸಿದ್ದ ಒಗ್ಗಟ್ಟು ಈಗ ನೋಟಿಸ್ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.
ಶಿವಕುಮಾರ್ ನಡುವೆ ಗುದ್ದಾಟಕ್ಕೆ ಕಾರಣವಾದಂತಿದೆ.
ಅಶೋಕ್ ಪಟ್ಟಣ್ ವಿರುದ್ಧ ಪರಾಮರ್ಶಿಸಿ ಕ್ರಮ ಕೈಗೊಳ್ಳಬಹುದಾಗಿತ್ತು. ದಿಢೀರ್ ನೋಟಿಸ್ ನೀಡಿರುವುದು ಸಿದ್ದರಾಮಯ್ಯನವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮೈಸೂರಿ ನಲ್ಲಿ ಪತ್ರಿಕಾಗೋಷ್ಠಿಯಲ್ಲೂ “ಅಲ್ಲಿನ ಸಮಸ್ಯೆ ಬಗ್ಗೆ ಹೇಳಿದ ಅಷ್ಟೇ. ನೋಟಿಸ್ ನೀಡಿದ್ದರೆ ಅದಕ್ಕೆ ಉತ್ತರ ಕೊಡುತ್ತಾನೆ ಬಿಡಿ’ ಎಂದು ಹೇಳಿದ್ದರು.
ಸುದ್ದಿಗೋಷ್ಠಿಯಲ್ಲಿ ಕುಳಿತವರು ನಾಲಿಗೆ ಹರಿಬಿಟ್ಟು ಪಕ್ಷಕ್ಕೆ ಹಾನಿ ಮಾಡುತ್ತಿದ್ದು ಹೀಗೇ ಬಿಟ್ಟರೆ ಕಷ್ಟವಾಗುತ್ತದೆ. ತತ್‌ಕ್ಷಣ ಕ್ರಮ ಕೈಗೊಂಡರೆ ಪಕ್ಷದ ಬಗ್ಗೆ ಭಯ ಇರುತ್ತದೆ ಎಂದು ಹಿರಿಯ ನಾಯಕರು ಹೇಳುತ್ತಿದ್ದಾರೆ ಎನ್ನಲಾಗಿದೆ.