ನವದೆಹಲಿ: ಹಿರಿಯ ನಟಿ ಹಾಗೂ ಬಿಜೆಪಿ ಮುಖಂಡೆ ಜಯಪ್ರದಾ ಅವರಿಗೆ ಮಾತೃ ವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ನೀಲವೇಣಿ (85) ಮಂಗಳವಾರ (ಫೆ. 01) ಮೃತಪಟ್ಟಿದ್ದಾರೆ.
ಅನಾರೋಗ್ಯ ಹಿನ್ನೆಲೆಯಲ್ಲಿ ನೀಲವೇಣಿ ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇದೇ ಸಮಯದಲ್ಲಿ ದೆಹಲಿಯಲ್ಲಿದ್ದ ಜಯಪ್ರದಾ ತಾಯಿ ಮೃತಪಟ್ಟಿರುವ ಸುದ್ದಿ ಕೇಳಿ ತಕ್ಷಣ ಹೈದರಾಬಾದ್ ಕಡೆ ಪ್ರಯಾಣ ಬೆಳೆಸಿದರು. ಜಯಪ್ರದಾ ತಾಯಿಯ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಜಯಪ್ರದಾ ಓರ್ವ ಬಹುಭಾಷಾ ನಟಿ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ರಂತಹ ಮಹಾನ್ ನಟರೊಂದಿಗೆ ನಟಿಸಿದ್ದು, ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. ಎಲ್ಲ ಭಾಷೆ ಸೇರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.