ನವದೆಹಲಿ : ದೇಶಾದ್ಯಂತ ಇಂದು 73ನೇ ಗಣರಾಜ್ಯೋತ್ಸವ ಆಚರಣೆ ಸಂಭ್ರಮ ಮನೆಮಾಡಿದೆ. 1949ರ ನವೆಂಬರ್ 26ರಂದು ರಚಿಸಲಾದ ದೇಶದ ಸಂವಿಧಾನವನ್ನು 1950ರ ಜನವರಿ 26ರಂದು ಅಂಗೀಕರಿಸಲಾಯಿತು. ಈ ದಿನವನ್ನು ದೇಶದ ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
ಭಾರತದ ಗಣರಾಜ್ಯೋತ್ಸವವು ಕೇವಲ ಆಚರಣೆಯಾಗಿರದೆ, ಅದು ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ಈ ಬಾರಿ ಮಹಾಮಾರಿ ಕೊರೊನಾ ನಡುವೆಯೂ ಗಣತಂತ್ರ ದಿನದ ಆಚರಣೆಗೆ ಇಡೀ ದೇಶ ಸನ್ನದ್ಧವಾಗಿದೆ. ಈ ದಿನದ ಇಂದು ಭಾರತೀಯ ಸೇನಾ ಪಡೆಗಳು ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಉತ್ಸಾಹ ಪ್ರದರ್ಶನ ನಡೆಯುತ್ತದೆ.
ಡಿಜಿಟಲ್ ನೋಂದಣಿ : ದೇಶದಲ್ಲಿ ಕೋವಿಡ್ ಅಬ್ಬರ ಜೋರಾಗಿರುವ ಕಾರಣ ನವದೆಹಲಿಯ ರಾಜಪಥ್ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ವೀಕ್ಷಣೆಗೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ರಾಜಪಥ್ನಲ್ಲಿ ಗಣರಾಜ್ಯೋತ್ಸವ ವೀಕ್ಷಿಸಲು ಆಸನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಅಲ್ಲದೆ ಸಾಂಕ್ರಾಮಿಕದ ಕಾರಣದಿಂದ ಈ ವರ್ಷವೂ ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನ ನೀಡಿಲ್ಲ.
ಪರೇಡ್ ಸಮಯ ಬದಲಾವಣೆ : ಪ್ರತಿ ವರ್ಷ ರಾಜಪಥ್ನಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆಗೆ ಪರೇಡ್ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಪರೇಡ್ ಕಾರ್ಯಕ್ರಮ 10:30ಕ್ಕೆ ಆರಂಭಗೊಳ್ಳಲಿದೆ. ಪರೇಡ್ ಪ್ರಾರಂಭವಾಗುವ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.
ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಶಹೀದೋಂ ಕೋ ಶತ ಶತ ನಮನ ಕಾರ್ಯಕ್ರಮ ಹೊಸದಾಗಿ ನಡೆಯಲಿದ್ದು, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಇದನ್ನ ನಡೆಸಿಕೊಡಲಿದೆ. ಇದರ ಜೊತೆಗೆ ಭಾರತೀಯ ವಾಯುಪಡೆಯ 75 ವಿಮಾನಗಳಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರಮುಖವಾಗಿ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 480 ನೃತ್ಯಗಾರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ.