ಚಿತ್ರದುರ್ಗ: ಕಡಿಮೆ ಬೆಲೆಗೆ ಅಸಲಿ ಚಿನ್ನ (Gold) ನೀಡೋದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ವಂಚಕರನ್ನ ಚಿತ್ರದುರ್ಗ ಪೊಲೀಸರು (Chitradurga Police) ಸಿನಿಮೀಯ ಸ್ಟೈಲ್ ನಲ್ಲಿ ಪ್ಲಾನ್ ಮಾಡಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನೇನು ನಕಲಿ ಬಂಗಾರ (Fake Gold) ಕೊಟ್ಟು ಹಣ (Money) ದೋಚಿ ಪರಾರಿ ಆಗೋಕೆ ಪ್ಲಾನ್ ಮಾಡಿದ್ದ ವಂಚಕರು ಪೊಲೀಸರು ತೋಡಿದ್ದ ಖೆಡ್ಡಾಕ್ಕೆ ಬಿದ್ದು ಜೈಲು ಸೇರಿದ್ದಾರೆ. ಮನುಷ್ಯನಿಗೆ ಕಡಿಮೆ ಬೆಲೆಗೆ ಏನಾದ್ರು ಬೆಲೆ ಬಾಳುವ ವಸ್ತುಗಳು ಸಿಗುತ್ತವೆ ಅಂದ್ರೆ ನನಗೂ ಇರಲಿ ನಮ್ಮ ಮನೆಯವರೆಗೂ ಇರಲಿ ಅನ್ನೋ ಚಾಳಿ. ಅದರಲ್ಲೂ ಗಗನಕ್ಕೆ ಏರಿಕೆ ಆಗಿರೋ ಚಿನ್ನದ ರೇಟು (Gold Price) ಕೇಳಿದರೆ ಅಬ್ಬಬ್ಬಾ ಇಷ್ಟೊಂದು ಬೆಲೆನಾ ಅನ್ನೋ ಈ ಪ್ರಸ್ತುತ ದಿನಮಾನಗಳಲ್ಲಿ ಅರ್ಧಕರ್ದ ಕಡಿಮೆ ಬೆಲೆಗೆ ಕೊಡ್ತಾರೆ ಅಂದರೆ ಯಾರಾದ್ರೂ ಬಿಡೋದು ಉಂಟೆ?, ಸಾಧ್ಯವೇ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಗೆ ಇಳಿದಿರುವವರು ಕತ್ತಲ ಕೋಣೆ ಸೇರಿದ್ದಾರೆ.
ಕಡಿಮೆ ಬೆಲೆಗೆ ಕೆಜಿಗಟ್ಟಲೆ ಚಿನ್ನ ಸಿಗುತ್ತೆ ಅಂದ್ರೆ ಸಾಲ ಸೂಲ ಮಾಡಿಯಾದರೂ ಕೊಂಡುಕೊಳ್ಳುವ ಆಸೆ ಮನುಷ್ಯಂದು. ಇಂಥ ಮನಸ್ಥಿತಿ ಮನುಷ್ಯನಲ್ಲಿ ಇರುವುದನ್ನ ನೋಡಿ ಗಮನಿಸಿರೋ ವಂಚಕರ ದುಡ್ಡು ಮಾಡುವ ದಾರಿ ಕಂಡುಕೊಳ್ಳೋದು ಸರ್ವೆ ಸಾಮಾನ್ಯ. ಇಂಥ ಪ್ರಕರಣಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಆಗಿಂದಾಗ್ಗೆ ಬೆಳಕಿಗೆ ಬಂದಿವೆ.