ವಾಲಮನ್‍ಗಳ ಮುಷ್ಕರದಿಂದ ಬೆಳಗಾವಿ ನಗರದಾಧ್ಯಂತ ನೀರು ಪೂರೈಕೆ ಆಗದೇ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಸ್ಮಾರ್ಟಸಿಟಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ಒಂದು ವಾರದಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಹೌದು ಬೆಳಗಾವಿಯಲ್ಲಿ ಸಧ್ಯ ನೀರಿಗಾಗಿ ಹಾಹಾಕಾರ ಶುರುವಾಗಿದೆ. ವಾಲಮನ್‍ಗಳ ಧರಣಿಯಿಂದ ಜನ ನೀರಿಗಾಗಿ ಕೊಡಗಳನ್ನು ಹಿಡಿದುಕೊಂಡು ಬೀದಿ, ಬೀದಿ ಸುತ್ತುತಿದ್ದಾರೆ. ಆದರೆ ಇದೇ ನಗರದಲ್ಲಿ ಸಿವಿಲ್ ಆಸ್ಪತ್ರೆ ಮುಂಭಾಗದ ರಸ್ತೆಯ ಡಾ.ಭಾತೆ ಕ್ಲಿನಿಕ್ ಬಳಿ ಕುಡಿಯುವ ನೀರಿನ ಪೈಪ್ ಒಡೆದು ಒಂದು ವಾರ ಆಗುತ್ತಾ ಬಂದಿದೆ. ಕಳೆದ ಒಂದು ವಾರದಿಂದ ಇದೇ ರೀತಿ ನೀರು ಹರಿದು ಚರಂಡಿ ಸೇರುತ್ತಿದೆ. ಇಲ್ಲಿನ ಸ್ಥಳೀಯರು ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದ್ರೂ ಅವ್ರು ಇತ್ತ ಕಣ್ಣೆತ್ತಿಯೂ ನೋಡಿಲ್ಲ.
ಇನ್ನೇನು ಎರಡು ತಿಂಗಳಲ್ಲಿ ಬೇಸಿಗೆ ಆರಂಭವಾಗಲಿದೆ. ಆಗ ಕುಡಿಯುವ ನೀರಿಗಾಗಿ ಜನ ಪರಿತಪಿಸಬೇಕಾಗುತ್ತದೆ. ಹೀಗಾಗಿ ಪೋಲಾಗುತ್ತಿರುವ ನೀರನ್ನು ತಡೆಯಬೇಕು ಎಂಬ ಕನಿಷ್ಠ ಜ್ಞಾನವು ಸಂಬಂಧಿಸಿದ ಅಧಿಕಾರಿಗಳಿಗೆ ಇಲ್ಲದೇ ಇರುವುದು ಸಧ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಪೋಲಾಗುತ್ತಿರುವ ನೀರನ್ನು ತಡೆಯುವ ಕೆಲಸ ಮಾಡಬೇಕಿದೆ. ಇಲ್ಲದೇ ಹೋದ್ರೆ ಜನ ರೊಚ್ಚಿಗೆದ್ದು ನೀರಿಗಾಗಿ ನಿಮ್ಮ ಕಚೇರಿಗೆ ಮುತ್ತಿಗೆ ಹಾಕಿದ್ರೂ ಅಚ್ಚರಿ ಇಲ್ಲ.