ಬೆಂಗಳೂರು: ಕಲ್ಲು ಬಂಡೆಗಳನ್ನು ನುಗ್ಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ಡಿಸೈನ್ ವೀರರಿಗೆ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಅಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ ಅಲ್ಲವೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಡಿ.ಕೆ.ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕನಕಪುರ, ರಾಮನಗರ ಯಾರೊಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ ಎಂಬುದು ನನಗಿಂತ ಇಲ್ಲಿನ ಜನರಿಗೆ ಚೆನ್ನಾಗಿ ಗೊತ್ತಿದೆ. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ? ಆ ಕ್ಷಣ ಹತ್ತಿರ ಬಂದಂತಿದೆ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ನಾವು ಹಾಸನದಿಂದ ಬಂದಿದ್ದೇವೆ ನಿಜ. ಇಲ್ಲಿನ ಜನ ನಮ್ಮನ್ನು ಮನೆ ಮಕ್ಕಳೆಂದು ಭಾವಿಸಿದ್ದಾರೆ. ನಾವೂ ಹಾಗೆಯೇ ನಡೆದುಕೊಂಡಿದ್ದೇವೆ. ಜನರ ಪ್ರೀತಿ, ಅಭಿಮಾನ, ನಮ್ಮ ದುಡಿಮೆ ಫಲವಾಗಿ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಜನರೇ ನಮಗೆ ಅಧಿಕಾರ ನೀಡಿದ್ದಾರೆ.
ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ. ಹಣ, ಧರ್ಪ, ಧಮ್ಕಿ, ಧಿಮಾಕು ಇನ್ನು ಸಾಕು. ಜನ ಕೊಟ್ಟೂ ನೋಡುತ್ತಾರೆ, ಕೆಲವೊಮ್ಮೆ ಬಿಟ್ಟೂ ನೋಡುತ್ತಾರೆ. ಅನುಭವದಿದ ಪಾಠ ಕಲಿತರೆ ಒಳ್ಳೆಯದು. ಉಳಿದದ್ದು ಅವರಿಗೇ ಬಿಟ್ಟಿದ್ದು ಎಂದು ಚಾಟಿ ಬೀಸಿದ್ದಾರೆ.
Laxmi News 24×7