ಬೆಳಗಾವಿ: ಇಂದು ಮಹಿಳೆಗೆ ಪುರುಷ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರೆ ಅದಕ್ಕೆ ಕಾರಣ ಅಂದು ಸಮಾನತೆಯ ಹಕ್ಕಿಗೆ ಕಾರಣವಾಗಿ ಕ್ರಾಂತಿಕಾರಿ ಮಹಿಳೆಯಾಗಿ ಹೊರಹೊಮ್ಮಿದ್ದ ಸಾವಿತ್ರಿಬಾಯಿ ಪುಲೆ ಅವರಂಥ ಶ್ರಮವೇ ಕಾರಣ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.
ನಗರದ ಸದಾಶಿವ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 191 ನೇ ಜಯಂತಿ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರು ಸಮಾಜದ ಎಲ್ಲ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣವಾಗುವ ಮೂಲಕ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ ಸೇರಿದಂತೆ ಸಮಾಜದ ಅನಿಷ್ಠ ಪದ್ದತಿಗಳ ವಿರುದ್ದ ಹೋರಾಡಿದವರಾಗಿದ್ದಾರೆ.ಆ ಕಾಲದಲ್ಲಿ ಸ್ತ್ರೀಯೋಬ್ಬಳು ಶಿಕ್ಷಕಿಯಾಗುವುದು ಸಮಾಜಕ್ಕೆ ದ್ರೋಹ ಬಗೆದಂತೆ ಎಂಬ ಭಾವನೆಯಲ್ಲಿತ್ತು. ಅವರು ಪಾಠ ಶಾಲೆಗೆ ಹೋಗುವಾಗ ಕೆಲವರು ಕೇಕೆ ಹಾಕಿ ನಗುವುದರೊಂದಿಗೆ ಅವರ ಮೇಲೆ ಕೆಸರು, ಸೆಗಣಿ ಎರಚುತ್ತಿದ್ದರು.ಇದರಿಂದ ದೃತಿ ಗೆಡದ ಸಾವಿತ್ರಿ ಬಾಯಿ ಫುಲೆ ಅವರು ಯಾವಾಗಲೂ ಒಂದು ಹೆಚ್ಚಿಗೆ ಸೀರೆಯನ್ನು ಇಟ್ಟು ಕೊಂಡಿರುತ್ತಿದ್ದರು ಎಂದು ಹೇಳಿ ಅವರ ಜೀವನ ಯಶೋಗಾಥೆಯನ್ನು ಎಳೆ ಎಳೆಯಾಗಿ ವಿವರಿಸಿದರಲ್ಲದೇ ಇವರ ಅಂದಿನ ಎಲ್ಲ ಸಾಧನೆಗಳನ್ನು ಪರಿಗಣಿಸಿ ಬ್ರಿಟೀಷ್ ಸರಕಾರ ಅವರಿಗೆ “ಇಂಡಿಯನ್ ಫಷ್ಠ್ ಲೇಡಿ ಟೀಚರ್” ಎಂದು ಬಿರುದು ನೀಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೀತಿ ಕುಕಡೆ ಸಾವಿತ್ರಿಬಾಯಿ ಪುಲೆ ಅವರು ಮುಖ್ಯೋಪಾದ್ಯಾಯಿನಿಯಾಗಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಭಾರತದ ಮೊಟ್ಟ ಮೊದಲ ಶಿಕ್ಷಕಿಯಾಗಿ, ದಣಿವರಿಯದ ಸತ್ಯ ಶೋಧಕಿಯಾಗಿ ಆಧುನಿಕ ಶಿಕ್ಷಣದ ತಾಯಿಯಾಗಿ ತಮ್ಮದೆ ಆದ ಸೇವೆಯ ಮೂಲಕ ಗುರುತಿಸಿಕೊಂಡವಾರಾಗಿದ್ದರು. ಅಂತಹ ಅಕ್ಷರದವ್ವಳ ನೆನಪಿಗಾಗಿ ಇಂದು ಮಹಿಳಾ ಸಂಘಟನೆ ಹುಟ್ಟುಹಾಕುತ್ತಿರುವುದು ಸಂತಸ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಅತಿಥಿಗಳಾಗಿ ಸಮಾಜ ಸೇವಕ ರಾಹೂಲ ಬಡಸ್ಕರ್,ಬಿಜೆಪಿ ಯುವ ಮೋರ್ಚಾ ಮಹಾನಗರ ಅಧ್ಯಕ್ಷ ಪ್ರಸಾದ ದೇವರಮನಿ,ಕಲಾವಿದ ಮತ್ತು ಸಮಾಜ ಸೇವಕ ಆಕಾಶ ಹಲಗೇಕರ, ಹಾಗೂ ದೀಪಕ ಕೇತ್ಕರ್,ಯಶಸ್ವಿನಿ ಮಹಿಳಾ ಮಂಡಳ ಅಧ್ಯಕ್ಷೆ ಪ್ರಮಿಳಾ ಪಾಟೀಲ ಆಗಮಿಸಿದ್ದರು.ಗೌತಮ್ ಕುಕಡೆ ನಿರೊಪಿಸಿದರು.