Breaking News

ಧಾರವಾಡ: ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ -ಬಸವರಾಜ ಹೊರಟ್ಟಿ

Spread the love

ಹುಬ್ಬಳ್ಳಿ: ‘ಶಿಕ್ಷಕರ ಬೇಡಿಕೆಗಳನ್ನು ಪರಿಹರಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿಶೇಷ ಸಭೆಯನ್ನು ಮುಂದಿನ ಜ. 15ರ ನಂತರ ಕರೆಯಲಾಗುವುದು’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಗರದ ಸಿದ್ಧಾರೂಢ ಮಠದ ಕಲ್ಯಾಣಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ‘ಗ್ರಾಮೀಣ ಶಿಕ್ಷಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

 

‘ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ, ನಾನು ಸಚಿವನಾಗಿದ್ದಾಗ ವರ್ಗಾವಣೆ ನೀತಿ ಜಾರಿ ಮಾಡಲಾಗಿತ್ತು. ನಂತರ ಅದರಲ್ಲಿ ಹಲವು ಬದಲಾವಣೆಗಳಾಗಿವೆ. ಈ ಕುರಿತು ಯಾವ ಸಚಿವರೂ ಚಿಂತನೆ ನಡೆಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಿಕ್ಷಕರ ಸಮಸ್ಯೆಗಳು ಹನುಮಂತನ ಬಾಲದಂತಿವೆ. ಒಂದು ಸಮಸ್ಯೆ ಬಗೆಹರಿಸಿದರೆ ಮತ್ತೊಂದು ಶುರುವಾಗುತ್ತದೆ. ಕೆಲ ಅಧಿಕಾರಿಗಳ ಮೂರ್ಖತನದಿಂದ ಶಿಕ್ಷಕರಿಗೆ ತೊಡಕಾಗುತ್ತಿದೆ. ಕೃಪಾಂಕ ನೀಡುವುದರಲ್ಲೂ ಲೋಪ ಎಸಗಿರುವುದು ಇದಕ್ಕೆ ಉದಾಹರಣೆ. ಶಿಕ್ಷಕರು ನೆಮ್ಮದಿಯಿಂದ ಇದ್ದರೆ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ’ ಎಂದು ಹೇಳಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಸಜ್ಜನ ಮಾತನಾಡಿ, ‘ಇಲಾಖೆಯಲ್ಲಿ ಗ್ರಾಮೀಣ ಶಿಕ್ಷಕರಿಗೆ ಆಗುತ್ತಿರುವ ತಾರತಮ್ಯವನ್ನು ತಪ್ಪಿಸಬೇಕು. ವರ್ಗಾವಣೆ ಆದೇಶವಾಗಿದ್ದರೂ ಕೆಲವರಿಗೆ ಸ್ವೀಕೃತ ಪ್ರತಿ ನೀಡಿಲ್ಲ. ಸಮಸ್ಯೆ ಪರಿಹಾರವಾಗದಿದ್ದರೆ, ಅಹಿಂಸಾ ಚಳವಳಿ ನಡೆಸಲಾಗುವುದು’ ಎಂದರು.

ಶಿಕ್ಷಕರ 34 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಬಸವರಾಜ ಹೊರಟ್ಟಿ ಅವರಿಗೆ ಸಲ್ಲಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಪ್ರಾಥಮಿಕ ಶಾಲೆಗಳ 82 ಶಿಕ್ಷಕರಿಗೆ ಗಣ್ಯರು ‘ಗ್ರಾಮೀಣ ಶಿಕ್ಷಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅವರನ್ನು ಸನ್ಮಾನಿಸಲಾಯಿತು.

ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್‌. ಭಟ್‌, ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಅಧ್ಯಕ್ಷ ಗುರು ತಿಗಡಿ ಇದ್ದರು.

ಸಮಾರಂಭದ ಬಳಿಕ ಸಂಘದ ಎರಡನೇ ಮಹಾಸಭೆ ಜರುಗಿತು


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ